ಕಾಶ್ಮೀರ ಘರ್ಷಣೆ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆ; 4 ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ: ಪ್ರತ್ಯೇಕತಾವಾದಿ ಮುಖಂಡರಿಂದ ಬಂದ್ ಗೆ ಕರೆ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾನಿರತರ ಮಧ್ಯೆ ಘರ್ಷಣೆ, ಕರ್ಫ್ಯೂ ಮುಂದುವರಿಯುತ್ತಿದ್ದು...
ನಿನ್ನೆ ಕಾಶ್ಮೀರಕ್ಕೆ ಆಗಮಿಸಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿರುವುದು.
ನಿನ್ನೆ ಕಾಶ್ಮೀರಕ್ಕೆ ಆಗಮಿಸಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿರುವುದು.
Updated on: 
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾನಿರತರ ಮಧ್ಯೆ ಘರ್ಷಣೆ, ಕರ್ಫ್ಯೂ  ಮುಂದುವರಿಯುತ್ತಿದ್ದು, ಸಾವಿನ ಸಂಖ್ಯೆ 50ಕ್ಕೇರಿದೆ. 
ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ  ಜುಲೈ 10ರಂದು ತೀವ್ರವಾಗಿ ಗಾಯಗೊಂಡಿದ್ದ ಸಮೀರ್ ಅಹ್ಮದ್ ಎಂಬ ವ್ಯಕ್ತಿ ನಿನ್ನೆ ಅಸುನೀಗಿದ್ದಾನೆ.
ಮೊನ್ನೆ 15ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಯರಿಪೊರ ಪೊಲೀಸ್ ಠಾಣೆ ಮೇಲೆ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಯಿಂದ ಮುದಾಸಿರ್ ಅಹ್ಮದ್ ಎಂಬ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.
ಈ ಮಧ್ಯೆ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಾದ ಅನಂತನಾಗ್, ಕುಲ್ಗಾಮ, ಶೊಪಿಯಾನ್, ಪುಲ್ವಾಮ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮುಂದುವರಿಸಲಾಗಿದೆ. ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಕರ್ಫ್ಯೂ ಪೀಡಿತ ಪ್ರದೇಶಗಳಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ.
ಈ ಜಿಲ್ಲೆಗಳಲ್ಲಿ ಅಂಗಡಿ-ಮುಂಗಟ್ಟುಗಳು, ವ್ಯಾಪಾರ, ವಾಣಿಜ್ಯ ಸಂಸ್ಥೆಗಳು, ಪೆಟ್ರೋಲ್ ಪಂಪ್ ಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳು, ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತಗೊಂಡಿವೆ. ಮೊಬೈಲ್, ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ. 
ನಿನ್ನೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ನಿನ್ನೆ ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಆಲಿ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸಿನ್ ಮಲಿಕ್ ಅವರು ಕರೆ ನೀಡಿದ್ದ ಮುಷ್ಕರವನ್ನು ಜುಲೈ 29ಕ್ಕೆ ವಿಸ್ತರಿಸಿದ್ದಾರೆ. ಇಂದು ಸಂಪೂರ್ಣ ಬಂದ್ ಗೆ ಕರೆ ನೀಡಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಪಟ್ಟಣಕ್ಕೆ ಮೆರವಣಿಗೆ ಸಾಗುವಂತೆ ಕರೆ ನೀಡಿದ್ದಾರೆ. ನಾಳೆ ಅಪರಾಹ್ನ 2 ಗಂಟೆಯಿಂದ ಬಂದ್ ಆಚರಣೆಯಲ್ಲಿ ಸಡಿಲ ಮಾಡುವಂತೆ ಕರೆ ನೀಡಿದ್ದು, ಜನರು ತಮ್ಮ ಅಗತ್ಯ ವಸ್ತುಗಳನ್ನು ಈ ಸಂದರ್ಭದಲ್ಲಿ ಖರೀದಿಸಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ ಪಟ್ಟಣಕ್ಕೆ ಮೆರವಣಿಗೆ ಹೋಗಲು ನಾಡಿದ್ದು 27ರಂದು ಕರೆ ನೀಡಿದ್ದು, ಜುಲೈ 28ಕ್ಕೆ ಸಂಪೂರ್ಣ ಬಂದ್ ಆಚರಿಸುವಂತೆ ಕೋರಿದ್ದಾರೆ. ಇನ್ನು ಶ್ರೀನಗರದ ಜಮಿಯಾ ಮಸ್ಜೀದ್ ಗೆ ಜುಲೈ 29ರಂದು ಮೆರವಣಿಗೆ ಹೋಗುವಂತೆ ಪ್ರತ್ಯೇಕತಾವಾದಿ ಮುಖಂಡರು ಕೋರಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಶ್ರೀನಗರ-ಮುಜಾಫರಾಬಾದ್ ಬಸ್ ಸೇವೆ ಸೋಮವಾರದಿಂದ ಆರಂಭವಾಗಲಿದೆ. ಇದು ಕಳೆದ ಎರಡು ವಾರಗಳಿಂದ ಸ್ಥಗಿತಗೊಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com