ಬ್ಯಾಂಕ್ ಸಾಲಕ್ಕಾಗಿ ಕಿಂಗ್​ಫಿಷರ್ ಬ್ರಾಂಡ್ ಅಡವಿಟ್ಟಿದ್ದ ಮಲ್ಯ!

ವಿವಿಧ ಕಾರಣಗಳಿಗಾಗಿ ಉದ್ಯಮಿ ವಿಜಯ್ ಮಲ್ಯ ಖಾಸಗಿ ಬ್ಯಾಂಕ್ ನಿಂದ ಸಾಲ ಪಡೆಯುವಾಗ ತಮ್ಮ ಕಿಂಗ್​ಫಿಷರ್ ಬ್ರಾಂಡ್ ಅನ್ನೇ ಅಡಮಾನವಾಗಿ ಇಟ್ಟಿದ್ದ ವಿಚಾರ ಬಹಿರಂಗವಾಗಿದೆ...
ಉಧ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)
ಉಧ್ಯಮಿ ವಿಜಯ್ ಮಲ್ಯ (ಸಂಗ್ರಹ ಚಿತ್ರ)

ಬೆಂಗಳೂರು: ವಿವಿಧ ಕಾರಣಗಳಿಗಾಗಿ ಉದ್ಯಮಿ ವಿಜಯ್ ಮಲ್ಯ ಖಾಸಗಿ ಬ್ಯಾಂಕ್ ನಿಂದ ಸಾಲ ಪಡೆಯುವಾಗ ತಮ್ಮ ಕಿಂಗ್​ಫಿಷರ್ ಬ್ರಾಂಡ್ ಅನ್ನೇ ಅಡಮಾನವಾಗಿ ಇಟ್ಟಿದ್ದ ವಿಚಾರ ಬಹಿರಂಗವಾಗಿದೆ.

ಖಾಸಗಿ ಬ್ಯಾಂಕ್ ಐಡಿಬಿಐನಿಂದ ವಿಜಯ್ ಮಲ್ಯ 864 ಕೋಟಿ ರು. ಸಾಲ ಪಡೆದಿದ್ದರು. ಮಲ್ಯ ಸಾಲ ಪಡೆಯುವಾಗ ಅವರ ಒಡೆತನದ ಕಿಂಗ್​ಫಿಷರ್ ಏರ್​ಲೈನ್ಸ್​ನ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಹೀಗಿದ್ದೂ ಐಡಿಬಿಐ ಬ್ಯಾಂಕ್ ಮಲ್ಯಾಗೆ 864 ಕೋಟಿ ರು. ಸಾಲ ನೀಡಿತ್ತು. ಐಡಿಬಿಐ ಬ್ಯಾಂಕ್ ತಾನು ನೀಡಿದ ಸಾಲಕ್ಕಾಗಿ ಕಿಂಗ್​ಫಿಷರ್ ಬ್ರಾಂಡ್, ಯುನೈಟೆಡ್ ಬ್ರೇವರೀಸ್​ನ ಕಾರ್ಪೋರೇಟ್ ಗ್ಯಾರಂಟಿ ಹಾಗೂ ಮಲ್ಯ ಅವರ ವೈಯಕ್ತಿಕ ಗ್ಯಾರಂಟಿಯನ್ನು ಪಡೆದಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮಲ್ಯ ತಾವು ಪಡೆದಿರುವ ಸಾಲದ ಮೊತ್ತದ ಪೈಕಿ 807 ಕೋಟಿ ರು. ಮರುಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜುಲೈ 29ರಂದು ಸಿಬಿಐ ತನಿಖೆ ಆರಂಭಿಸಿದ್ದು, ಜನವರಿಯಲ್ಲಿ ಜಾರಿ ನಿರ್ದೇಶನಾಲಯ ಹಣ ದುರುಪಯೋಗ ದೂರು ದಾಖಲಿಸಿಕೊಂಡಿತ್ತು. ಸಾಲ ಪಡೆದ ಮೊತ್ತದ ಪೈಕಿ 423 ಕೋಟಿ ರು.ಗಳನ್ನು ವಿದೇಶಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹೀಗೆ ವಿದೇಶಕ್ಕೆ ರವಾನೆಯಾದ ಹಣಕ್ಕೆ ಮಲ್ಯಾರ ಬಳಿ ಯಾವುದೇ ಸೂಕ್ತ ಕಾರಣ ಮತ್ತು ದಾಖಲಾತಿಗಳಿಲ್ಲ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪಿಸಿದೆ. ಇದಲ್ಲದೆ ಎಸ್​ಬಿಐ ಸೇರಿದಂತೆ 17 ಬ್ಯಾಂಕ್​ಗಳಿಂದ ಪಡೆದ 9 ಸಾವಿರ ಕೋಟಿ ರು. ಸಾಲ ಮರುಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸಿಬಿಐ ತನಿಖೆ ನಡೆಸುತ್ತಿದೆ.

ಇತ್ತೀಚೆಗಷ್ಟೇ ಮಲ್ಯರನ್ನು ಘೊಷಿತ ಸುಸ್ತಿದಾರ ಎಂದು ಪ್ರಕಟಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿತ್ತು. ಇನ್ನೊಂದೆಡೆ ದೇಶದಲ್ಲಿನ ಕಾನೂನು ಸಮರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಲಂಡನ್​ಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆತರುವ ಮಾಡುವ ಬಗ್ಗೆಯೂ ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com