
ಕೊಯಿಮತ್ತೂರು: ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಹಂತಕನೊಬ್ಬನನ್ನು ಕೊಲೆ ಮಾಡಿ ಪತ್ನಿಯೊಬ್ಬಳು ಹಗೆ ತೀರಿಸಿಕೊಂಡಿರುವ ಘಟನೆಯೊಂದು ಕಲ್ಲಿಪಾಳಯಂನ ಪೆರಿಯನೈಕೆನ್ಪಾಲಯಂನಲ್ಲಿ ಶುಕ್ರವಾರ ನಡೆದಿದೆ.
ಎಂ.ರವಿಕುಮಾರ್ (50) ಹತ್ಯೆಯಾದ ಹಂತಕ. ಪಿ.ಸುಗುಂತಮಣಿ (35) ಹಂತಕನನ್ನು ಹತ್ಯೆ ಮಾಡಿದ ಮಹಿಳೆಯಾಗಿದ್ದಾಳೆ.
ದಿನಗೂಲಿ ಕೆಲಸ ಮಾಡಿಕೊಂಡಿದ್ದ ಕೆ.ಪೆರಿಯತಂಬಿ ಅಲಿಯಾ ರಂಗಸ್ವಾಮಿ (42) ಎಂಬುವವರನ್ನು ಇದೀಗ ಕೊಲೆಯಾಗಿರುವ ಎಂ. ರವಿಕುಮಾರ್ (50) ಕಳೆದ ವರ್ಷ ಜೂನ್ 5 ರಂದು ಹತ್ಯೆ ಮಾಡಿದ್ದ. ರವಿಕುಮಾರ್ ಹಾಗೂ ರಂಗಸ್ವಾಮಿ ಇಬ್ಬರು ಸ್ನೇಹಿತರಾಗಿದ್ದು, ಮನೆಯೊಂದರಲ್ಲಿ ಇಬ್ಬರು ಮದ್ಯಪಾನ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ವಿಷಯವೊಂದರ ಕುರಿತು ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ರವಿಕುಮಾರ್ ಒನಕೆ ತೆಗೆದುಕೊಂಡು ರಂಗಸ್ವಾಮಿ ತಲೆಗೆ ಜೋರಾಗಿ ಹೊಡೆದಿದ್ದಾನೆ. ರಂಗಸ್ವಾಮಿ ಅವರ ತಲೆಗೆ ತೀವ್ರವಾಗಿ ಗಾಯಗೊಂಡ ಕಾರಣ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಆರೋಪಿ ರವಿಕುಮಾರ್ ವಿರುದ್ಧ ಪೆರಿಯನೈಕೆನ್ಪಾಲಯಂನ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ ಪ್ರಕರಣ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದರು. ಇದರಂತೆ ಕೊಯಿಮತ್ತೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ ವಿವಾದ ನಂತರ ನಂತರ ಇದೇ ಜೂನ್.14 ರಂದು ರವಿಕುಮಾರ್ ತನ್ನ ಮೇಲಿದ್ದ ಎಲ್ಲಾ ಪ್ರಕರಣಗಳಿಂದ ಮುಕ್ತಗೊಂಡು ಜೈಲಿನಿಂದ ಬಿಡುಗಡೆಗೊಂಡಿದ್ದ. ಇದರಂತೆ ಕಲ್ಲಿಪಾಲಯಂಗೆ ಹಿಂತಿರುಗಿದ್ದ.
ಶುಕ್ರವಾರ ಬೆಳಿಗ್ಗೆ ಹತ್ಯೆಯಾದ ರಂಗಸ್ವಾಮಿಯವರ ಪತ್ನಿ ಪಿ.ಸುಗುಂತಮಣಿ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದರು. ಇದರಂತೆ ಬಸ್ ಬಂದಿದೆ. ಬಸ್ ನಿಂದ ರವಿಕುಮಾರ್ ಇಳಿಯುತ್ತಿದ್ದುದ್ದನ್ನು ಸುಗುಂತಮಣಿ ನೋಡಿದ್ದಾಳೆ. ಈ ವೇಳೆ ರವಿಕುಮಾರ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾಳೆ. ವಾಗ್ವಾದದ ವೇಳೆ ತೀವ್ರವಾಗಿ ಕೋಪಗೊಂಡಿರುವ ಆಕೆ ದೊಡ್ಡದಾದ ಕಲ್ಲೊಂದನ್ನು ತೆಗೆದುಕೊಂಡು ರವಿಕುಮಾರ್ ತಲೆ ಮೇಲೆ ಹಾಕಿದ್ದಾಳೆ. ತೀವ್ರವಾಗಿ ಗಾಯಗೊಂಡ ರವಿಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕಾಗಮಿಸಿದ ಪೆರಿಯನೈಕೆನ್ಪಾಲಯಂ ಪೊಲೀಸರು ಸುಗುಂತಮಣಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ಸುಗುಂತಮಣಿ ತಪ್ಪೊಪ್ಪಿಕೊಂಡಿದ್ದಾಳೆ.
Advertisement