ಇಂದೋರ್: ನೆರೆಯ ಖರ್ಗೋನ್ ಜಿಲ್ಲೆಯ 30 ವರ್ಷದ ವ್ಯಕ್ತಿಯೊಬ್ಬ ತನ್ನ ಕೈಹಿಡಿದ ಪತ್ನಿಯನ್ನೇ ಫೇಸ್ ಬುಕ್ ನಲ್ಲಿ ಕೇವಲ 1 ಲಕ್ಷ ರುಪಾಯಿಗೆ ಮಾರಾಟಕ್ಕಿಟ್ಟ ವಿಲಕ್ಷಣ ಘಟನೆ ಸೋಮವಾರ ವರದಿಯಾಗಿದ್ದು, ಇದು ಸಾಮಾಜಿಕ ತಾಣದಲ್ಲಿ ತೀವ್ರ ಚರ್ಚಗೆ ಕಾರಣವಾಗಿದೆ.
ಪತಿಯ ಈ ಆಕ್ಷೇಪಾರ್ಹ ಪೋಸ್ಟ್ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 509ರಡಿ ಪತಿ ದಿಲಿಪ್ ಮಲಿ ವಿರುದ್ಧ ಕೇಸ್ ದಾಖಲಿಸಿಕೊಂಡಿರುವುದಾಗಿ ಏರೊಡ್ರೋಮ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಆರೋಪಿಯ ಬಂಧನಕ್ಕೆ ಬಲೆ ಬೀಸಿರುವುದಾಗಿ ಹೇಳಿದ್ದಾರೆ.
ಪತ್ನಿಯ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿ, ಮಾರಾಟ ಮಾಡುತ್ತಿರುವುದಾಗಿ ಹಿಂದಿಯಲ್ಲಿ ಪೋಸ್ಟ್ ಹಾಕಿರುವ ದಿಲಿಪ್, ತನ್ನ ಮೊಬೈಲ್ ನಂಬರ್ ಬರೆದು ಆಸಕ್ತರು ತನ್ನನ್ನು ಸಂಪರ್ಕಿಸಿ ಎಂದು ಕೇಳಿಕೊಂಡಿದ್ದಾನೆ.
'ನಾನು ವಿವಿಧ ವ್ಯಕ್ತಿಗಳಿಂದ ಪಡೆದ ಸಾಲವನ್ನು ಹಿಂದಿರುಗಿಸಬೇಕಾಗಿದ್ದು. ಅದಕ್ಕಾಗಿ 1 ಲಕ್ಷ ರುಪಾಯಿಗೆ ನನ್ನ ಪತ್ನಿಯನ್ನು ಮಾರಾಟ ಮಾಡುತ್ತಿದ್ದೇನೆ. ನನ್ನ ಪತ್ನಿಯನ್ನು ಖರೀದಿಸಲು ಆಸಕ್ತಿ ಇದ್ದವರು ನನ್ನನ್ನು ಸಂಪರ್ಕಿಸಿ' ಎಂದು ದಿಲಿಪ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪತ್ನಿಯ ಸಂಬಂಧಿಕರು ನಿನ್ನೆ ಆಕೆಗೆ ತಿಳಿಸಿದ್ದಾರೆ. ಕೂಡಲೇ ಪತಿ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆತಂದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ಮೂರು ವರ್ಷಗಳ ಹಿಂದೆ ದಿಲಿಪ್ ನನ್ನು ಮದುವೆಯಾಗಿದ್ದ ಮಹಿಳೆ, ಪತಿಯೊಂದಿಗೆ ಇಂದೋರ್ ನಲ್ಲಿ ವಾಸವಾಗಿದ್ದರು. ಅಲ್ಲಿ ಪತಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿದ್ದ. ಆದರೆ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ ಎಂದು ಪತ್ನಿ ತಿಳಿಸಿದ್ದಾರೆ.