

ಅಹಮದಾಬಾದ್: ಗುಜರಾತ್ ನಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಕಾಂಗ್ರೆಸ್ ನ ನಿರಂತರ ಆರೋಪದ ಬೆನ್ನಲ್ಲೇ ಗುಜರಾತ್ ನಲ್ಲಿ ಶಿಕ್ಷಕರ ಕೊರತೆ ಇದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ.
ರಾಜ್ಯ ಸರ್ಕಾರದಿಂದ ನಿರ್ವಹಣೆಯಾಗುತ್ತಿರುವ ಪ್ರಾಥಮಿಕ ಶಾಲೆಗಳಲ್ಲಿ 13 ,000 ಶಿಕ್ಷಕರ ಕೊರತೆ ಎದುರಾಗಿದೆ ಎಂದು ಸರ್ಕಾರ ಇತ್ತೀಚೆಗೆ ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದೆ. ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಇರಬೇಕಾದ ಶಿಕ್ಷಕರ ಸಂಖ್ಯೆ 1,80,601 , ಆದರೆ ಕಾರ್ಯನಿರ್ವಹಿಸುತ್ತಿರುವವರು ಮಾತ್ರ 1,67,461 ಶಿಕ್ಷಕರು ಎಂದು ಸರ್ಕಾರ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಒಟ್ಟು 13 ,140 ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಕಛ್ ಜಿಲ್ಲೆ ಹಾಗೂ ಬನಸ್ಕಾಂತ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರ ಕೊರತೆ ಇದೆ. ಕಛ್ ನಲ್ಲಿ 2 ,724 ಹುದ್ದೆಗಳು ಖಾಲಿ ಇದ್ದರೆ, ಬನಸ್ಕಾಂತದಲ್ಲಿ ,1 ,741 ಹುದ್ದೆಗಳು ಖಾಲಿ ಇವೆ. ಮತ್ತೊಂದು ಅಂಕಿ-ಅಂಶಿಗಳ ಪ್ರಕಾರ 6 -8 ನೇ ತರಗತಿಗೆ ಗಣಿತ- ವಿಜ್ಞಾನ ವಿಷಯ ಬೋಧಿಸುವ 2 ,400 ಶಿಕ್ಷಕರ ಕೊರತೆ ಇದೆ.