ಎನ್ಐಎ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ: ಹೆಡ್ಲಿ

26/11 ಮುಂಬೈ ದಾಳಿ ಕುರಿತಂತೆ ನಡೆದ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಾನು ನೀಡಿದ್ದ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ...
ಎನ್ಐಎ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ: ಹೆಡ್ಲಿ
ಎನ್ಐಎ ನನ್ನ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ: ಹೆಡ್ಲಿ

ಮುಂಬೈ: 26/11 ಮುಂಬೈ ದಾಳಿ ಕುರಿತಂತೆ ನಡೆದ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಾನು ನೀಡಿದ್ದ ಹೇಳಿಕೆಯನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಉಗ್ರ ಡೇವಿಡ್ ಹೆಡ್ಲಿ ಶನಿವಾರ ಹೇಳಿದ್ದಾನೆ.

ಮುಂಬೈ ನಲ್ಲಿ ನಡೆಯುತ್ತಿರುವ 4ನೇ ದಿನದ ಪಾಟಿ ಸವಾಲು ಪ್ರಕ್ರಿಯೆ ವೇಳೆ ಮಾತನಾಡಿರುವ ಹೆಡ್ಲಿ, 26/11 ಮುಂಬೈ ದಾಳಿ ಕುರಿತಂತೆ ಎನ್ ಐಎ ನನ್ನನ್ನು ವಿಚಾರಣೆಗೊಳಪಡಿಸಿತ್ತು. ಈ ವೇಳೆ ಹಲವು ಆಯಾಮಗಳಲ್ಲಿ ನನ್ನನ್ನು ವಿಚಾರಣೆ ನಡೆಸಿತ್ತು.

ವಿಚಾರಣೆ ವೇಳೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಮುಜಾಮ್ಮಿಲ್ ಭಟ್ ಹಾಗೂ ಗುಜರಾತ್ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಇಶ್ರಾತ್ ಜಹಾನ್ ಕುರಿತಂತೆ ಹೇಳಿಕೆಯನ್ನು ನೀಡಲಾಗಿತ್ತು. ಆದರೆ, ವಿಚಾರಣೆ ವೇಳೆ ನಾನು ನೀಡಿದ್ದ ಹೇಳಿಕೆ ಹಾಗೂ ಪದ ಬಳಕೆಗಳನ್ನು ಅಧಿಕಾರಿಗಳು ಸರಿಯಾಗಿ ದಾಖಲಿಸಿಕೊಂಡಿಲ್ಲ ಎಂದು ಹೇಳಿದ್ದಾನೆ.

ಹೇಳಿಕೆ ದಾಳಿಸಿಕೊಂಡ ಅಧಿಕಾರಿಗಳು ನಂತರ ಅದನ್ನು ನನಗೆ ಓದಿ ಹೇಳಲಿಲ್ಲ. ಹೇಳಿಕೆಯ ಪ್ರತಿಯನ್ನು ನಾನು ಅಧಿಕಾರಿಗಳ ಬಳಿ ಕೇಳಲಿಲ್ಲ. ಅಧಿಕಾರಿಗಳೂ ಕೂಡ ಹೇಳಿಕೆಯ ಪ್ರತಿಯನ್ನು ನನಗೆ ನೀಡಲಿಲ್ಲ ಎಂದು ಹೇಳಿದ್ದಾನೆ.

2003ರಲ್ಲಿ ಎಲ್ಇಟಿ ಮುಖ್ಯಸ್ಥ ಝಕಿ-ಉರ್-ರೆಹಮಾನ್ ಲಖ್ವಿ, ಮುಝಾಮ್ಮಿಲ್ ಭಟ್ ನನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದರು. ಇನ್ನು ಇಶ್ರಾತ್ ಜಹಾನ್ ಬಗ್ಗೆಯೂ ಲಖ್ವಿ ನನಗೆ ಮಾಹಿತಿ ನೀಡಿದ್ದ. ಆದರೆ, ಲಖ್ವಿ ಹೇಳುವುದಕ್ಕೂ ಮುನ್ನವೇ ನಾನು ಪತ್ರಿಕೆಗಳಲ್ಲಿ ಇಶ್ರಾತ್ ಬಗ್ಗೆ ತಿಳಿದುಕೊಂಡಿದ್ದೆ. ಎನ್ಐಎ ನನ್ನ ಹೇಳಿಕೆಯನ್ನು ಹಾಗೂ ಬಳಕೆ ಮಾಡಿದ್ದ ಪದಗಳನ್ನು ಸರಿಯಾಗಿ ದಾಖಲಿಸಿಕೊಂಡಿಲ್ಲ. ಲಖ್ವಿ ನನ್ನನ್ನು ಮುಝಾಮ್ಮಿಲ್ ಭಟ್ ಗೆ  ಪರಿಚಯ ಮಾಡಿಕೊಟ್ಟಿದ್ದ ಎಂದು ನಾನು ಹೇಳಿಯೇ ಇರಲಿಲ್ಲ. ಇನ್ನು ಇಶ್ರಾತ್ ಜಹಾನ್ ಬಗ್ಗೆಯೂ ಎನ್ ಐಎ ಮಾಹಿತಿ ನೀಡಿದ್ದೆ.

ಎನ್ಐಎ ನಾನು ನೀಡಿದ್ದ ಹೇಳಿಕೆಯನ್ನು ಯಾಕೆ ಸರಿಯಾದ ರೀತಿಯಲ್ಲಿ ದಾಖಲು ಮಾಡಿಕೊಂಡಿಲ್ಲ ಎಂಬುದಕ್ಕೆ ನಾನು ಉತ್ತರಿಸಲು ಸಾಧ್ಯವಿಲ್ಲ ಎಂದಿದ್ದಾನೆ. ಇದೇ ವೇಳೆ ಎನ್ಐಎ ದಾಖಲಿಸಿಕೊಂಡಿದ್ದ ದಾಖಲೆಗಳನ್ನು ಹೆಡ್ಲಿಗೆ ತೋರಿಸಿದಾಗ ನಾನು ನೀಡಿದ್ದ ಹೇಳಿಕೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆಂದು ಹೇಳಿದ್ದಾನೆ. ಅಲ್ಲದೆ ಅಬು ಅಯಾಮನ್ ತಾಯಿ ಎಲ್ಇಟಿ ಉಗ್ರ ಸಂಘಟನೆಯ ಮಹಿಳೆಯರ ಮುಖ್ಯಸ್ಥೆಯಾಗಿರುವ ಹೇಳಿಕೆಯನ್ನು ಸತ್ಯ ಎಂದು ಒಪ್ಪಿಕೊಂಡಿದ್ದಾನೆ.

ತನಿಖೆ ವೇಳೆ ಎನ್ಐಎ 6-7 ಫೋಟೋಗಳನ್ನು ನನಗೆ ತೋರಿಸಿತ್ತು. ಆರಂಭದಲ್ಲಿ ಅಧಿಕಾರಿಗಳು ಫೋಟೋಗಳೊಂದಿಗೆ ಹೆಸರುಗಳನ್ನು ತೋರಿಸಲು ಮುಂದಾಗಿದ್ದರು. ಆದರೆ, ಅಮೆರಿಕದ ಫಿರ್ಯಾದಿಗಳು ಆಕ್ಷೇಪಣೆ ವ್ಯಕ್ತಪಡಿಸಿದಾಗ ಬರೀ ಫೋಟೋಗಳನ್ನು ಮಾತ್ರ ತೋರಿಸಿದ್ದರು. ನಂತರ 7 ಫೋಟೋಗಳಲ್ಲಿ ಒಬ್ಬರನ್ನು ಮಾತ್ರ ಗುರ್ತಿಸಿದ್ದೆ ಎಂದು ಹೇಳಿದ್ದಾನೆ.

ಇದೇ ವೇಳೆ ಪರ್ವೇಜ್ ಮುಷರಫ್ ಅವರನ್ನು ಹತ್ಯೆ ಮಾಡಲು ಎಲ್ ಇಟಿ ಯೋಜನೆ ರೂಪಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಹೆಡ್ಲಿ, ನಾನು ಹಾಗೂ ನನ್ನ ಸಂಘಡಿಗರು ಪರ್ವೇಜ್ ಮುಷರಫ್ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದೇವೆಂಬುದು ಸುಳ್ಳು ಎಂದು ಹೇಳಿದ್ದಾನೆ.

ಶಿವಸೇನೆ ಮುಖ್ಯಸ್ಥ ಠಾಕ್ರೆಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಹಫೀಜ್ ಸಯ್ಯೀದ್ ನನ್ನ ಬಳಿ ಹೇಳಿಕೊಂಡಿದ್ದ. ಇದಕ್ಕಾಗಿ ಆತನ ಬಳಿ ನಾನು ಸಮಯವನ್ನು ಕೇಳಿರಲಿಲ್ಲ. ಆದರೆ, ಕೆಲಸ ಮುಗಿಸಲು 6 ತಿಂಗಳಾಗುತ್ತದೆ ಎಂದು ಹೇಳಿದ್ದೆ.

ಭಾರತದಲ್ಲಿ ಇಸ್ಲಾಮಿಕ್ ನಿಯಮ ಹೇರಲು ನಾನು ಯತ್ನಿಸುತ್ತಿದ್ದೇನೆಂಬುದು ಸುಳ್ಳು. ಅಮೆರಿಕ, ಇಸ್ರೇಲ್ ಹಾಗೂ ಭಾರತ ದೇಶಗಳು ಇಸ್ಲಾಂನ ಶತ್ರುಗಳು ಎಂದು ನಾನು ನಂಬಿದ್ದೆ ಎಂದು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com