
ಗುರ್‌ಗಾಂವ್: ವೇಗವಾಗಿ ಕಾರು ಚಲಾಯಿಸಿ ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಕಾರಿನ ಬೊನೆಟ್ ಮೇಲೆ ಬಿದ್ದ ಬೈಕ್ ಸವಾರನನ್ನು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿರುವ ಘಟನೆಯೊಂದು ನವದೆಹಲಿಯ ಸಮೀಪದ ಗುರ್‌ಗಾಂವ್ ನಲ್ಲಿ ನಡೆದಿದೆ.
ಮಾರ್ಚ್ 28ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಪ್ರತೀಕ್ ಕುಮಾರ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ಕಾರು ಚಾಲಕ, ನಂತರ ಕಾರು ನಿಲ್ಲಿಸದೆಯೇ ಕಾರಿನ ಮೇಲೆ ಬಿದ್ದ ಪ್ರತೀಕ್ ನನ್ನು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿದ್ದಾನೆ. ಈ ವೇಳೆ ದಾರಿ ಮಧ್ಯದಲ್ಲಿ ಮತ್ತೋರ್ವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಾಗ ಪ್ರತೀಕ್ ಕೆಳಗೆ ಬಿದ್ದಿದ್ದಾರೆ.
ನಾನು ಮತ್ತು ನನ್ನ ಮೂರು ವರ್ಷದ ಮಗು ಸಂಬಂಧಿಕರ ಮನೆಗೆ ಹೋಗುತ್ತಿದ್ದೆವು. ಈ ವೇಳೆ ವೇಗವಾಗಿ ಬರುತ್ತಿದ್ದ ಕಪ್ಪು ಬಣ್ಣದ ಹೊಂಡಾ ಸಿಟಿ ಕಾರೊಂದು ನನ್ನ ಬೈಕ್ ಗೆ ಗುದ್ದಿತು. ಕಾರನ್ನು ನಿಲ್ಲಿಸದ ಚಾಲಕ, ಕಾರಿನ ಬೊನೆಟ್ ಮೇಲೆ ನಾನು ಬಿದ್ದಿದ್ದರೂ ಅರ್ಧ ಕಿ.ಮೀ ದೂರದ ವರೆಗೂ ಎಳೆದೊಯ್ದ.
ಈ ವೇಳೆ ಆತನನ್ನು ಹಿಡಿಯಲು ಯತ್ನಿಸಿದೆ ಆದರೂ ಪರಾರಿಯಾಗಿಬಿಟ್ಟ. ಘಟನೆ ನಂತರ ಪೊಲೀಸರಿಗೆ ದೂರು ನೀಡಲು ಹೋದಾಗ ನನ್ನ ಮೇಲೆ ಯಾವುದೇ ಗಾಯಗಳಾಗದಿರುವುದನ್ನು ಗಮನಿಸಿದ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು. ನಂತರ ಸ್ಥಳೀಯ ಅಂಗಡಿಗಳ ಸಿಸಿಟಿವಿ ವಿಡಿಯೋವನ್ನು ಪರಿಶೀಲಿಸಿದೆ. ಈ ವೇಳೆ ವಿಡಿಯೋ ಸಿಕ್ಕಿತ್ತು. ಅಂಗಡಿಗಳ ಮಾಲೀಕರ ಬಳಿ ಮನವಿ ಮಾಡಿ ವಿಡಿಯೋ ಪಡೆದು ದೂರು ದಾಖಲಿಸಲಾಯಿತು ಎಂದು ಪ್ರತೀಕ್ ಹೇಳಿಕೊಂಡಿದ್ದಾರೆ.
ಇದೀಗ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Advertisement