ಕಿಶನ್ ಗಂಜ್: ಮಾಜಿ ಕೇಂದ್ರ ಸಚಿವ ಹಾಗೂ ಆರ್ ಜೆಡಿ ಸಂಸದ ಮೊಹಮ್ಮದ್ ತಸ್ಲಿಮುದ್ದೀನ್ ಅವರು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಪ್ರಧಾನಿಯಾಗುವ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ತಸ್ಲಿಮುದ್ದೀನ್, ನಿತಿಶ್ ಕುಮಾರ್ ಅವರು ಪ್ರಧಾನಿ ವಸ್ತು ಅಲ್ಲ. ಬಿಹಾರದಲ್ಲಿ ಉತ್ತಮ ಆಡಳಿತ ನೀಡಲು ವಿಫಲವಾಗಿರುವ ವ್ಯಕ್ತಿ ಇಡೀ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಪ್ರಶ್ನಿಸಿದರು.
ನಿತಿಶ್ ಕುಮಾರ್ ಅವರು ಮದ್ಯದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುವ ಮೂಲಕ ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಆರ್ ಜೆಡಿ ನಾಯಕ ವ್ಯಂಗ್ಯವಾಡಿದ್ದಾರೆ.
ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತಸ್ಲಿಮುದ್ದೀನ್ ಅವರು, ನಿತಿಶ್ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.