ಚೆನ್ನೈ: ಇದೊಂದು ಐತಿಹಾಸಿಕ ಗೆಲುವು ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು, ಪಕ್ಷದ ಐತಿಹಾಸಿಕ ಗೆಲುವಿಗೆ ಕಾರಣರಾದ ತಮಿಳು ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ ಪೋಯಸ್ ಗಾರ್ಡ್ ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಯಲಲಿತಾ, ಐತಿಹಾಸಿಕ ಗೆಲುವು ನೀಡಿದ ನನ್ನ ಜನತೆಗೆ ಧ್ಯನವಾದಗಳು. ನನ್ನ ಮಕ್ಕಳು, ಅಣ್ಣ, ತಮ್ಮ, ಅಕ್ಕ-ತಂಗಿಯರಿಗಾಗಿ ದುಡಿಯುವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 1982ರ ನಂತರ ಯಾವುದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ನೀವು ಎರಡನೇ ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ನಿಮಗೆ ಕೃತಜ್ಞತೆ ತಿಳಿಸಲು ನನ್ನ ಬಳಿ ಮಾತುಗಳೇ ಇಲ್ಲ ಎಂದು ಅಮ್ಮಾ ಹೇಳಿದ್ದಾರೆ.
ನಮ್ಮ ಮೇಲೆ ಅಧಿನಾಯಕ ಎಂಜಿಆರ್ ಅವರ ಆರ್ಶೀವಾದವಿದೆ. ಜನರ ಅಭಿವೃದ್ಧಿ ಬಿಟ್ಟರೆ ನನಗೆ ಬೇರೆ ಗುರಿ ಇಲ್ಲ. ಇಷ್ಟು ದಿನ ರಾಜ್ಯದ ಅಭಿವೃದ್ಧಿಗಾಗಿ ದುಡಿದಿದ್ದೇನೆ. ಇನ್ನು ಮುಂದೆಯೂ ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇನೆ. ನನ್ನ ಕೊನೆಯುಸಿರಿರುವವರೆಗೂ ಜನರಿಗಾಗಿ ದುಡಿಯುವೆ ಎಂದಿರುವ ಜಯಲಲಿತಾ, ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ ಬಾರಿಗೆ ಜಯಲಲಿತಾ ಅವರಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.