ಜನತೆಯನ್ನುದ್ದೇಶಿಸಿ ಸಿಎಂ ಜಯಲಲಿತಾ ಭಾಷಣ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಭೂತಪೂರ್ವ ಗೆಲುವಿನ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ಮತ್ತು ಸಿಎಂ ಜಯಲಲಿತಾ ಅವರು ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಒಟ್ಟು 234 ಕ್ಷೇತ್ರಗಳ ಪೈಕಿ ಸಿಎಂ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದೆ. ತಮಿಳುನಾಡಿನಲ್ಲಿ 118 ಮ್ಯಾಜಿಕ್ ನಂಬರ್ ಆಗಿದ್ದು, ಈಗಾಗಲೇ ಎಐಎಡಿಎಂಕೆ ಪಕ್ಷ ಬಹುಮತ ದಾಟಿ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಚುನಾವಣಾ ಫಲಿತಾಂಶದಲ್ಲಿ ಎಐಎಡಿಎಂಕೆ ಪಕ್ಷ ಸ್ಪಷ್ಟಬಹುಮತ ಪಡೆಯುತ್ತಿದ್ದಂತೆ ಚೆನ್ನೈನಲ್ಲಿರುವ ಎಐಎಡಿಎಂಕೆ ಪಕ್ಷ ಕಚೇರಿ ಮುಂಭಾಗದಲ್ಲಿ ಜಮಾಯಿಸಿರುವ ಸಾವಿರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಅತ್ತ ಫೋಯಸ್ ಗಾರ್ಡನ್ ನಲ್ಲಿರುವ ಜಯಲಲಿತಾ ಅವರ ನಿವಾಸದೆದುರು ಕೂಡ ಎಐಎಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಅಮ್ಮ ಭಾವಚಿತ್ರವಿರುವ ಸರ, ಓಲೆಗಳನ್ನು ಧರಿಸಿ ಕುಣಿದಾಡುತ್ತಿದ್ದಾರೆ.
ಡಿಎಂಕೆ ಕಚೇರಿಯಲ್ಲಿ ನೀರವ ಮೌನ
ಇತ್ತ ಮತ ಎಣಿಕೆ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಡಿಎಂಕೆ ಪಕ್ಷ ಬಳಿಕ ಹಿನ್ನಡೆಯನುಭವಿಸುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ. ಬೆಳಗ್ಗೆ ಡಿಎಂಕೆ ಕಚೇರಿಯಲ್ಲಿದ್ದ ಸಂಭ್ರಮ ಇದೀಗ ತಣ್ಣಗಾಗಿದ್ದು, ಕಾರ್ಯಕರ್ತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ತಮಿಳುನಾಡಿನ ರಾಜಕೀಯ ಸಂಪ್ರದಾಯದಂತೆ ಈ ಬಾರಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಹೇಳಲಾಗುತ್ತಿತ್ತು. ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಇದನ್ನೇ ಪ್ರತಿಪಾದಿಸಿದ್ದವು. ಆದರೆ ಮತದಾರನ ತೀರ್ಪು ಬೇರೆಯಾಗಿದ್ದು, ಎಐಎಡಿಎಂಕೆ ಪಕ್ಷ ಅಧಿಕಾರದತ್ತ ದಾಪುಗಾಲಿರಿಸಿದೆ.
ಕರುಣಾನಿಧಿ ನಿವಾಸಕ್ಕೆ ಆಗಮಿಸಿದ ಸ್ಟಾಲಿನ್, ಕನ್ನಿಮೋಳಿ
ಮತ್ತೊಂದೆಡೆ ಚುನಾವಣಾ ಫಲಿತಾಂಶದಲ್ಲಿ ಡಿಎಂಕೆ ಹಿನ್ನಡೆ ಅನುಭವಿಸುತ್ತಿದ್ದಂತೆಯೇ ಕರುಣಾನಿಧಿ ಅವರ ಚೆನ್ನೈ ನಿವಾಸದತ್ತ ಡಿಎಂಕೆ ಗಣ್ಯರ ದಂಡೇ ಹರಿದು ಬಂದಿದೆ. ಕರುಣಾನಿಧಿ ಪುತ್ರ ಸ್ಟಾಲಿನ್, ಪುತ್ರಿ ಕನ್ನಿಮೋಳಿ, ಎ.ರಾಜಾ ಸೇರಿದಂತೆ ಹಲವು ಮುಖಂಡರು ಆಗಮಿಸಿ ಚರ್ಚೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ