
ಅಲಿಗಢ: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ 8 ಸಿಮಿ ಉಗ್ರರನ್ನು ಎನ್'ಕೌಂಟರ್ ಮಾಡಿ ಹತ್ಯೆ ಮಾಡಿದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ಒತ್ತಾಯಿಸಿದ್ದಾರೆ.
ಎನ್ ಕೌಂಟರ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಆದರೆ, ಈ ಬಗ್ಗೆ ಎಚ್ಚರಿಕೆ ವಹಿಸಿದ್ದ ವಿವಿಯ ಆಡಳಿತ ಮಂಡಳಿ ಅಧಿಕಾರಿಗಳು ಪ್ರತಿಭಟನೆ ಬಹಿರಂಗಗೊಳ್ಳದಂತೆ ನೋಡಿಕೊಂಡಿದ್ದಾರೆ.
ನಿನ್ನೆ ಕೂಡ ವಿದ್ಯಾರ್ಥಿಗಳು ಸಂಘಟನೆಗಳು ಕೆಲ ವಿವಿ ಆವರಣದಲ್ಲಿ ಘೋಷಣಾ ವಾಕ್ಯಗಳನ್ನು ಕೂಗಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫೈಜುಲ್ ಹಸನ್ ಅವರು, ಕೇಂದ್ರದ ಆಡಳಿತರೂಢ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನಾವೂ ಕೂಡ ಭಯೋತ್ಪಾದನೆ ವಿರುದ್ಧವಿದ್ದೇವೆ. ಎಲ್ಲರೂ ಒಗ್ಗೂಡಿದಾಗ ಮಾತ್ರ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯ. ಕೇವಲ ಒಂದು ಸಮುದಾಯದ ಜನರನ್ನೇ ಗುರಿ ಮಾಡಿಕೊಂಡು ದಾಳಿ ಮಾಡಬಾರದು. ಮುಗ್ಧರನ್ನು ಗುರಿ ಮಾಡುವ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಟ ಸಡಿಲಗೊಳ್ಳುವಂತೆ ಮಾಡಲಾಗುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದಿದ್ದೇ ಆದರೆ, ದೇಶದಲ್ಲಿ ಉಂಟಾಗುವ ದ್ವೇಷಪೂರಿತ ವಾತಾವರಣ ಹಾಗೂ ಧಾರ್ಮಿಕ ಉಗ್ರಗಾಮಿತ್ವಕ್ಕೆ ಮೋದಿ ಸರ್ಕಾರ ನೇರವಾಗಿ ಹೊಣೆಯಾಗಲಿದೆ. ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂಬುದು ಎಎಂಯುಗೆ ತಿಳಿದಿದೆ. ದೇಶದಲ್ಲಿ ಯಾವುದೇ ರೀತಿಯಲ್ಲಿ ಅನ್ಯಾಯ ನಡೆದರೂ ನಾವು ಅದರ ವಿರುದ್ಧ ಎದ್ದು ನಿಲ್ಲುತ್ತೇವೆಂದು ಹೇಳಿದ್ದಾರೆ.
ಅಲ್ಲದೆ, ಎನ್'ಕೌಂಟರ್ ಪ್ರಕರಣ ಸಂಬಂಧ ಈಗಾಗಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಮನವಿ ಪತ್ರವನ್ನು ಬರೆಯಲಾಗಿದ್ದು, ಪ್ರಕರಣವನ್ನು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಸಿಮಿ ಉಗ್ರರು ಹತ್ಯೆ ಮಾಡಿದ ಪೇದೆ ಸಾವು ಕುರಿತಂತೆ ಸಂತಾಪವನ್ನು ಸೂಚಿಸಿದ್ದಾರೆ.
Advertisement