ಭಾರತೀಯ ಅಧಿಕಾರಿಗಳ ವಿರುದ್ಧದ ಪಾಕ್ ಆರೋಪ ಆಧಾರ ರಹಿತ: ವಿಕಾಸ್ ಸ್ವರೂಪ್

8 ಭಾರತೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಬೇಹುಗಾರಿಕೆ ಆರೋಪವನ್ನು ಹೊರಿಸಿದ್ದು, ಅಧಿಕಾರಿಗಳ ವಿರುದ್ಧದ ಪಾಕಿಸ್ತಾನ ಆರೋಪ ಆಧಾರ ರಹಿತವಾದದ್ದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಗುರುವಾರ...
ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್
ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್

ನವದೆಹಲಿ: 8 ಭಾರತೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಬೇಹುಗಾರಿಕೆ ಆರೋಪವನ್ನು ಹೊರಿಸಿದ್ದು, ಅಧಿಕಾರಿಗಳ ವಿರುದ್ಧದ ಪಾಕಿಸ್ತಾನ ಆರೋಪ ಆಧಾರ ರಹಿತವಾದದ್ದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಗುರುವಾರ ಹೇಳಿದ್ದಾರೆ.

8 ಭಾರತೀಯ ರಾಯಭಾರ ಸಿಬ್ಬಂದಿಗಳು ಪಾಕಿಸ್ತಾನದ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದಾರೆಂದು ಹೇಳಿ ಪಾಕಿಸ್ತಾನ ಸರ್ಕಾರ ಈ ಹಿಂದೆ ಗಂಭೀರ ಆರೋಪವನ್ನು ಮಾಡಿತ್ತು.

ಈ ಕುರಿತ ವರದಿಗಳು ಪಾಕಿಸ್ತಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಭಾರತೀಯ ಅಧಿಕಾರಿಗಳ ಹೆಸರುಗಳು  ಹಾಗೂ ಫೋಟೋಗಳು ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಬಹಿರಂಗಗೊಳಿಸಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಪಾಕಿಸ್ತಾನದ ಈ ನಡೆಗೆ ವಿರೋಧವನ್ನು ವ್ಯಕ್ತಪಡಿಸಿದೆ. ಈ ಕುರಿತಂತೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಭಾರತೀಯ ಅಧಿಕಾರಿಗಳ ಮಾಹಿತಿಯನ್ನು ಬಹಿರಂಗಪಡಿಸಿರುವ ಪಾಕಿಸ್ತಾನದ ಈ ನಡೆಯನ್ನು ಭಾರತ ಖಂಡಿಸುತ್ತದೆ. 8 ಭಾರತೀಯ ಅಧಿಕಾರಿಗಳ ಪೈಕಿ ನಾಲ್ವರು ಅಧಿಕಾರಿಗಳು ರಾಜತಾಂತ್ರಿಕ ಪಾಸ್ ಪೋರ್ಟ್ ನ್ನು ಹೊಂದಿದ್ದರು. ಇದನ್ನು ಪಾಕಿಸ್ತಾನ ಸರ್ಕಾರ ಬಹಿರಂಗ ಪಡಿಸಿದೆ. ಭಾರತೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಗಂಭೀರ ಆರೋಪವನ್ನು ಮಾಡುತ್ತಿದ್ದು, ಈ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳು ಜನರನ್ನು ಸಂಪರ್ಕಿಸುವುದು, ವ್ಯಾಪಾರ ವಹಿವಾಟುಗಳು ಹಾಗೂ ಆರ್ಥಿಕ ಸಂಪರ್ಕವನ್ನು ಕಲ್ಪಿಸುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಪಾಕಿಸ್ತಾನ ಮೊದಲು ವಿಫಲಗೊಂಡಿರುವ ತನ್ನ ನೀತಿಗಳನ್ನು ಕೈಬಿಡುವ ಅಗತ್ಯವಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಪಾಕಿಸ್ತಾನ ರಾಜತಾಂತ್ರಿಕವಾಗಿ ಏಕಾಂಗಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಉಗ್ರರು ಗಡಿ ನುಸುಳಲು ಹಾಗೂ ಉಗ್ರರ ಏಳಿಗೆಗೆ ಪಾಕಿಸ್ತಾನ ಬೆಂಬಲವನ್ನು ನೀಡುತ್ತಿದ್ದು, ಇದು ಉಭಯ ರಾಷ್ಟ್ರಗಳ ಸಂಬಂಧದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಸಾರ್ಕ್ ಚೌಕಟ್ಟಿನೊಳಗೆ ಪ್ರಾದೇಶಿಕ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಯಬೇಕಿದ್ದಾರೆ ಪಾಕಿಸ್ತಾನ ಮೊದಲು ತನ್ನೊಳಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದಿದ್ದಾರೆ.

ಇದೇ ವೇಳೆ ಕದನ ವಿರಾಮ ಉಲ್ಲಂಘನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಸೇನೆ ಅಪ್ರಚೋದಿತ ದಾಳಿ ಹಾಗೂ ಕದನ ವಿರಾಮ ಉಲ್ಲಂಘನೆಯನ್ನು ಎಂದಿಗೂ ಸಹಿಸುವುದಿಲ್ಲ. ಕದನ ವಿರಾಮವನ್ನು ಉಲ್ಲಂಘನೆ ಮಾಡುವವರಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನೇ ನೀಡಲಿದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂಬ ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿರುವ ಅವರು, ಆಧಾರ ರಹಿತವಾದ ಆರೋಪಗಳನ್ನು ಭಾರತ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com