ಭುವನೇಶ್ವರ್: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಪ್ರಶ್ನೆಯಿಲ್ಲ ಎಂದು ಒರಿಸ್ಸಾ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಹೇಳಿದ್ದಾರೆ.
"ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿಯ ಪ್ರಶ್ನೆ ಇಲ್ಲವೇ ಇಲ್ಲ. ಕಾಂಗ್ರೆಸ್ ಎಂದಿಗೂ ಒರಿಸ್ಸಾ ಜನತೆಯನ್ನು ತಿರಸ್ಕರಿಸಿದೆ" ಎಂದು ಬಲಾಸೋರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
ಹೀಗಿದ್ದೂ, ಅವರ ನಿಲುವನ್ನು ಮರುಪರಿಶೀಲಿಸಲು ಕೆಲವು ಬಿಜು ಜನತಾದಳದ ನಾಯಕರ ಒತ್ತಡವಿದೆ ಎನ್ನಲಾಗಿದೆ.
"ಕಾಂಗ್ರೆಸ್ ಮತ್ತಿ ಬಿಜೆಪಿ ಪಕ್ಷಗಳಿಂದ ದೂರವುಳಿಯುವ ನಮ್ಮ ನಿಲುವನ್ನು ಮರುಪರಿಶೀಲನೆ ಮಾಡಿಕೊಳ್ಳುವ ಇರಾದೆ ಹೊಂದಿದ್ದೇವೆ. ರಾಜಕಾರಣ ಚಲನಶೀಲ, ಇಲ್ಲ ಯಾರು ಅಸ್ಪೃಶ್ಯರಲ್ಲ" ಎಂದು ಬಿಜೆಡಿ ಸಂಸದ ಭರ್ತೃಹರಿ ಮಹತಾಬ್ ಹೇಳಿದ್ದರು.
ಬಿಜೆಪಿ ವಿರುದ್ಧ ಸೆಣೆಸಲು ಬಿಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಹಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಸುಳಿವನ್ನು ಲೋಕಸಭಾ ಸದಸ್ಯ ಮಹತಾಬ್ ಬಿಟ್ಟುಕೊಟ್ಟಿದ್ದರಿಂದ ಈ ಊಹಾಪೋಹಗಳು ಎದ್ದಿವೆ.