ಅಸ್ವಸ್ಥ ತಾಯಿ, ಮಗಳಿಗೆ ವಿಐಪಿ ಸೀಟ್ ನೀಡಿ ಔದಾರ್ಯ ಮೆರೆದ ಕೇಂದ್ರ ಸಚಿವ

ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ಅವರು ಬೆಂಗಳೂರು - ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿನ...
ಸಚಿವರೊಂದಿಗೆ ಯುವತಿ ಸೆಲ್ಫಿ
ಸಚಿವರೊಂದಿಗೆ ಯುವತಿ ಸೆಲ್ಫಿ
Updated on: 
ನವದೆಹಲಿ: ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ಅವರು ಬೆಂಗಳೂರು - ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿನ ಅಸ್ವಸ್ಥ ತಾಯಿ ಹಾಗೂ ಮಗಳಿಗೆ ತಮ್ಮ ಹಾಗೂ ತಮ್ಮ ಪತ್ನಿಗಾಗಿ ಕಾದಿರಿಸಲಾಗಿದ್ದ ಮುಂದಿನ ಸಾಲಿನ ವಿಐಪಿ ಸೀಟುಗಳನ್ನು ಬಿಟ್ಟುಕೊಟ್ಟು ತಾವು ಸಾಮಾನ್ಯ ದರ್ಜೆಯ ಸೀಟುಗಳಲ್ಲಿ ಪ್ರಯಾಣಿಸಿ ಔದಾರ್ಯ ತೋರಿ ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಅಸ್ವಸ್ಥ ತಾಯಿ - ಮಗಳು ಬೆಂಗಳೂರಿನಿಂದ ರಾಂಚಿಗೆ ಹೋಗಲು ಇಂಡಿಗೋ ವಿಮಾನದ ಮಿತವ್ಯಯದ ದರ್ಜೆಯಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಕಾಲಿನ ತೊಂದರೆ ಹೊಂದಿದ್ದ ತಾಯಿಗೆ ಕಾಲು ಚಾಚಿಕೊಂಡು ಕುಳಿತುಕೊಳ್ಳುವುದು ಆ ಸೀಟಿನಲ್ಲಿ ಅಸಾಧ್ಯವಾಗಿತ್ತು. ಮುಂದಿನ ಸಾಲಿನ ಎಕ್ಸ್‌ ಎಲ್‌ (ಮುಂಬಾಗಿಲಿನ ಸಮೀಪವಿರುವ, ಕಾಲು ಚಾಚುವ ಸ್ಥಳಾವಕಾಶವಿರುವ) ಸೀಟು ಖಾಲಿ ಇದ್ದುದರಿಂದ ತಾಯಿ - ಮಗಳು ಆ ಸೀಟುಗಳಲ್ಲಿ ಕುಳಿತುಕೊಂಡರು. 
ಕೋಲ್ಕತಾದಲ್ಲಿ ವಿಮಾನ ನಿಂತಾಗ, ಈ ವಿಮಾನವನ್ನೇರಿದ ಜಯಂತ್‌ ಸಿನ್ಹಾ  ಮತ್ತು ಅವರ ಪತ್ನಿ, ತಮಗಾಗಿ ಕಾದಿರಿಸಲಾಗಿದ್ದ ಈ ವಿಐಪಿ ಸೀಟುಗಳಲ್ಲಿ ಕುಳಿತುಕೊಳ್ಳುವವರಿದ್ದರು. ಆದರೆ ಅಸ್ವಸ್ಥ ತಾಯಿ - ಮಗಳು ತಮ್ಮ ಸೀಟುಗಳಲ್ಲಿ ಕುಳಿತಿರುವುದನ್ನು ಕಂಡು ನಿಜ ವಿಷಯವನ್ನು ಅರಿತುಕೊಳ್ಳುವ ಸಹನೆ, ತಾಳ್ಮೆ , ಸಹೃದಯತೆಯನ್ನು ಸಿನ್ಹಾ  ತೋರಿದರು. ಮಾತ್ರವಲ್ಲದೆ ತಾಯಿ - ಮಗಳು ಅದೇ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸುವಂತೆಯೂ, ತಾವು ಮಿತವ್ಯಯದ ದರ್ಜೆಯ ಸೀಟುಗಳಲ್ಲಿ ಕುಳಿತುಕೊಳ್ಳುವುದಾಗಿಯೂ ಹೇಳಿ ತಾಯಿ - ಮಗಳನ್ನು ಸಮಾಧಾನಿಸಿದರು. 
ವಿಮಾನದಲ್ಲಿ ತನ್ನ  ಅಸ್ವಸ್ಥ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ  ಮಗಳು ಶ್ರೇಯಾ ಪ್ರದೀಪ್‌ ಟ್ವಿಟರ್‌ನಲ್ಲಿ ಸಚಿವ ಜಯಂತ್‌ ಸಿನ್ಹಾ ತೋರಿರುವ ಔದಾರ್ಯ, ಸಹೃದಯತೆಯನ್ನು ಬಹುವಾಗಿ ಮೆಚ್ಚಿ ಧನ್ಯವಾದ ಹೇಳಿದ್ದಾರೆ. ಸಚಿವ ಜಯಂತ್‌ ಸಿನ್ಹಾ ಅವರ ಜತೆಗೆ ವಿಮಾನದಲ್ಲಿ  ತಾವು ತೆಗೆದುಕೊಂಡಿರುವ ಸೆಲ್ಫಿಯನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com