ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡುವುದು ಹೇಗೆ?: ವೈರಲ್ ಆಯ್ತು ಗೂಗಲ್ ಸರ್ಚ್!
ನವದೆಹಲಿ: ದುಬಾರಿ ಮುಖ ಬೆಲೆಯ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಮೋದಿ ಸರ್ಕಾರ ದೇಶದ ಜನತೆಗೆ ದೊಡ್ಡ ಶಾಕ್ ವೊಂದನ್ನು ನೀಡಿತ್ತು. ಮೋದಿ ಸರ್ಕಾರದ ಈ ಶಾಕ್ ನಿಂದಾಗಿ ಕಂಗಾಲಾಗಿರುವ ಹಲವಾರು ಭಾರತೀಯರು ಇದೀಗ ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ಗೂಗಲ್ ನಲ್ಲಿ ಹುಡಾಕಾಡಿದ್ದಾರೆ.
ಕೇಂದ್ರ ಸರ್ಕಾರ ತಾನು ತೆಗೆದುಕೊಂಡಿರುವ ಕಠಿಣ ನಿರ್ಧಾರವನ್ನು ಬಹಿರಂಗಗೊಳಿಸುತ್ತಿದ್ದಂತೆಯೇ, ತಮ್ಮ ಹಣವನ್ನು ರಕ್ಷಣೆ ಮಾಡುವ ಸಲುವಾಗಿ ಹಲವಾರು ಭಾರತೀಯರು ಗೂಗಲ್ ಮೊರೆ ಹೋಗಿದ್ದಾರೆ. ಗೂಗಲ್ ಇಂಕ್ ಡಾಟ್ ಜಾಲತಾಣಕ್ಕೆ ಬಂದಿರುವ ಅಸಂಖ್ಯಾತ ಭಾರತೀಯರು 'ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡುವುದು ಹೇಗೆ'?ಎಂಬ ಪ್ರಶ್ನೆಯನ್ನು ಹುಡುಕಾಡಿದ್ದಾರೆ. ಗೂಗಲ್ ಟ್ರೆಂಡ್ ನಿಂದಾಗಿ ಈ ಸತ್ಯಾಂಶ ಇದೀಗ ಬಹಿರಂಗಗೊಂಡಿದೆ.
ದೇಶದೆಲ್ಲೆಡೆ ಕಪ್ಪುಹಣ, ಭ್ರಷ್ಟಾಚಾರ ಹಾಗೂ ತೆರಿಗೆ ವಂಚನೆ ಹೆಚ್ಚಾಗುತ್ತಲೇ ಇದ್ದು, ಇವುಗಳನ್ನು ಮಟ್ಟ ಹಾಕುವ ಸಲುವಾಗಿ ಮೋದಿ ಸರ್ಕಾರ ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟಿನ ಮೇಲೆ ನಿಷೇಧ ಹೇರಿ, ಭ್ರಷ್ಟರ ವಿರುದ್ಧ ಸೀಮಿತ ದಾಳಿನ್ನು ನಡೆಸಿತ್ತು. ದೇಶದಲ್ಲಿ ಸಾಕಷ್ಟು ಮಂದಿ ತೆರಿಗೆ ವಂಚನೆಯನ್ನು ಮಾಡುತ್ತಿದ್ದು, ನಿರ್ಧಾರದ ಮೂಲಕ ದೇಶದಲ್ಲಿರುವ ಶೇ.86 ನಿಷ್ಪ್ರಯೋಜಕ ಹಣದ ಚಲಾವಣೆಯನ್ನು ನಿಷೇಧಿಸುವುದು ಸರ್ಕಾರ ಉದ್ದೇಶವಾಗಿತ್ತು.
ಸರ್ಕಾರ ತೆಗೆದುಕೊಂಡ ಈ ಒಂದು ನಿರ್ಧಾರ ಇದೀಗ ಭಾರತೀಯರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಮಾಡಿದೆ. ಪ್ರಮುಖವಾಗಿ ಕಪ್ಪುಹಣವನ್ನು ಬಚ್ಚಿಟ್ಟುಕೊಂಡಿರುವ ಕಾಳಧನಿಕರಿಗಂತೂ ದಿಕ್ಕೇ ತೋಚದಂತಾಗಿದೆ. ಹೀಗಾಗಿ ಕಪ್ಪು ಹಣವನ್ನು ಅಧಿಕೃತ ಹಣವನ್ನಾಗಿ ಪರಿವರ್ತಿಸುವ ಉಪಾಯಕ್ಕಾಗಿ ಹಲವಾರು ಭಾರತೀಯರು ಗೂಗಲ್ ಮೊರೆ ಹೋಗಿದ್ದಾರೆ.
ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಹುಡುಕಲು ಹೊರಟ ರಾಜ್ಯಗಳ ಪೈಕಿ ಹರಿಯಾಣ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಮಹಾರಾಷ್ಟ್ರ ಹಾಗೂ ವಾಣಿಜ್ಯ ನಗರಿ ಮುಂಬೈ ತದನಂತರ ಸ್ಥಾನಗಳನ್ನು ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ಪಂಜಾಬ್ ರಾಜ್ಯವಿದ್ದರೆ, ನಾಲ್ಕನೇ ಸ್ಥಾಲದಲ್ಲಿ ರಾಜಧಾನಿ ದೆಹಲಿ ಸೇರಿಕೊಂಡಿದೆ. ಇನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ತವರೂರು ಸಹ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು, ಗುಜರಾತ್ ರಾಜ್ಯದ ಬಹುತೇಕ ಮಂದಿ ಈ ಪ್ರಶ್ನೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಈ ಹುಡುಕಾಟದ ವಿಷಯವೀಗ ಗೂಗಲ್ ಟ್ರೆಂಡ್ ನಿಂದ ಬಹಿರಂಗಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ