ಮುಂಬೈ: ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ 8 ದಿನಗಳ ಭಾರತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು ಇಂದು ಬೆಳಗ್ಗೆ ಮುಂಬೈ ತಲುಪಿದ್ದಾರೆ.
ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ಬಹು ದೊಡ್ಡ ನಿಯೋಗದೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಿವ್ಲಿನ್ ಇಂದೇ ದೆಹಲಿಗೆ ತೆರಳಲಿದ್ದಾರೆ.
ಅಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡುವುದಲ್ಲದೆ ಎರಡೂ ದೇಶಗಳ ನಡುವಣ ಜಂಟಿ ಯೋಜನೆಗಳು ಮತ್ತು ಸಹಕಾರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ನಂತರ ಚಂಡೀಗಢದಲ್ಲಿ ನಡೆಯಲಿರುವ ಆಗ್ರೊ-ಟೆಕ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಜೊತೆ ಭಾಗವಹಿಸಲಿದ್ದಾರೆ.
2008ರ ಮುಂಬೈ ಉಗ್ರಗಾಮಿ ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಅಸುನೀಗಿದವರಿಗೆ ಗೌರವ ವಂದನೆ ಸಲ್ಲಿಸಲಿದ್ದಾರೆ. 1ನೇ ವಿಶ್ವಯುದ್ಧದಲ್ಲಿ ಮಡಿದ ಸೈನಿಕರು ಮತ್ತು ಮಹಾತ್ಮಾ ಗಾಂಧಿ ಸ್ಮಾರಕ ಇರುವ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿ ನಡೆದ 2008ರ ನವೆಂಬರ್ 26ರಂದು ಮುಂಬೈಯ ಚಬದ್ ಹೌಸ್ ನಲ್ಲಿ 6 ಮಂದಿ ಜ್ಯೂವಿಷ್ ನಾಗರಿಕರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಅವರು ಜ್ಯೂವಿಷ್ ಸಮುದಾಯದ ಮುಖಂಡರು ಮತ್ತು ಇತರ ಭಾರತೀಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.