ಭಾರತ-ಪಾಕಿಸ್ತಾನಕ್ಕೆ ಇಂಕ್, ಥ್ರೆಡ್ ಒಬ್ಬರಿಂದಲೇ ಪೂರೈಕೆ: ಓವೈಸಿ ಆರೋಪ

ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ಕರೆನ್ಸಿ ಮುದ್ರಣಕ್ಕೆ ಉಪಯೋಗಿಸಲಾಗುವ ಇಂಕ್ ಮತ್ತು ಭದ್ರತಾ ಧ್ರೆಡ್ ಪೂರೈಕೆದಾರರು ಒಬ್ಬರೇ ಆಗಿದ್ದಾರೆಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಮಂಗಳವಾರ ಗಂಭೀರವಾದ...
ಎಐಎಂಐಎಂ ಪಕ್ಷದ ಮುಖ್ಯಸ್ಥ  ಅಸಾದುದ್ದೀನ್ ಓವೈಸಿ
ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಹೈದರಾಬಾದ್: ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ಕರೆನ್ಸಿ ಮುದ್ರಣಕ್ಕೆ ಉಪಯೋಗಿಸಲಾಗುವ ಇಂಕ್ ಮತ್ತು ಭದ್ರತಾ ಧ್ರೆಡ್ ಪೂರೈಕೆದಾರರು ಒಬ್ಬರೇ ಆಗಿದ್ದಾರೆಂದು ಎಐಎಂಐಎಂ ಪಕ್ಷದ ಮುಖ್ಯಸ್ಥ  ಅಸಾದುದ್ದೀನ್ ಓವೈಸಿಯವರು ಮಂಗಳವಾರ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟಿನ ಮೇಲೆ ಮೋದಿ ಸರ್ಕಾರ ದಿಢೀರನೇ ನಿಷೇಧ ಹೇರಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ಕರೆನ್ಸಿ ಮುದ್ರಣಕ್ಕೆ ಬಳಸಲಾಗುತ್ತಿರುವ ಇಂಕ್ ಮತ್ತು ನೋಟಿನ ಮೇಲಿರುವ ಥ್ರೆಡ್ ಗಳನ್ನು ಒಬ್ಬರೇ ಪೂರೈಕೆ ಮಾಡುತ್ತಿದ್ದು, ನೋಟು ನಿಷೇಧದ ಹಿಂದಿರುವ ಕಾರ್ಯತಂತ್ರವೇನಿದೆ ಎಂದು ಪ್ರಶ್ನಿಸಿದ್ದಾರೆ.

ದಿಢೀರ್ ನೋಟು ನಿಷೇಧದಿಂದಾಗಿ ದೇಶದಲ್ಲಿರುವ ಅಸಂಖ್ಯಾತ ಜನರಿಗೆ ಬಹಳ ಸಮಸ್ಯೆಯುಂಟಾಗುತ್ತಿದೆ. ಹಳೇ ನೋಟನ್ನು ಬದಲಾಯಿಸಿಕೊಳ್ಳಲು ಕೇಂದ್ರ ಸರ್ಕಾರ ಜನರಿಗೆ ಕನಿಷ್ಠ 2 ತಿಂಗಳಾದರೂ ಕಾಲಾವಕಾಶವನ್ನು ನೀಡಬೇಕಿತ್ತು. ಯಾರೇ ಆದರೂ ತಮ್ಮ ಖಾತೆಯಲ್ಲಿ ದೊಡ್ಡ ಮೊತ್ತ ಹಣವನ್ನು ಜಮೆ ಮಾಡಿದರೆ, ಅದನ್ನು ಪತ್ತೆ ಹಚ್ಚುವುದು ಅಷ್ಟೊಂದು ಕಷ್ಟದ ಕೆಲಸವೇನೂ ಅಲ್ಲ.

ಫಿಲಿಪೈನ್ಸ್ ನಲ್ಲಿಯೂ ಇದೇ ರೀತಿಯಾಗಿ ನೋಟನ್ನು ರದ್ದು ಮಾಡಲಾಗಿತ್ತು. ಯೋರೋಪ್ ನಲ್ಲಿ ಯೂರೋ ಕರೆನ್ಸಿಯನ್ನು ಜಾರಿಗೆ ತಂದಾಗ ಜನರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿತ್ತು. ಭಾರತದಲ್ಲಿ ಮಾತ್ರ ಜನತೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿಲ್ಲ. ಹೀಗಾಗಿಯೇ ಜನರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೋಟು ನಿಷೇಧದ ನಿರ್ಧಾರ ಗ್ರಾಮೀಣ ಜನರಿಗೆ, ರೈತರಿಗೆ ಹಾಗೂ ನಗರದ ಜನರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ನಾಳೆಯಿಂದ ಆರಂಭಗೊಳ್ಳುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿಲುವಳಿ ಗೊತ್ತುವಳಿಯನ್ನು ಮಂಡಿಸಲಿದ್ದೇನೆ.

ನಮ್ಮ ದೇಶದಲ್ಲಿ ಚಲಾವಣೆಯಲ್ಲಿರುವ ನಗದು ಹಣದಲ್ಲಿ ಶೇ.86 ರಷ್ಟು ಪ್ರಮಾಣದ ಹಣ ರು.500 ಹಾಗೂ 1,000 ನೋಟುಗಳ ರೂಪದಲ್ಲಿದೆ. ಕೇಂದ್ರ ಸರ್ಕಾರ ಜನರಿಗೆ ರು.2000 ನೋಟನ್ನು ನೀಡಿದರೂ, ಅವರ ಬಳಿ ಚಿಲ್ಲರೆ ಹಣವಿಲ್ಲ. ಯಾವುದೇ ತಯಾರಿಯಿಲ್ಲದೆಯೇ, ಯೋಜನೆಗಳಿಲ್ಲದೆಯೇ ನಿರ್ಧಾರವನ್ನು ಕೈಗೊಳ್ಳಳಾಗಿದೆ. ಎಟಿಎ ಗಳಲ್ಲಿ ತಂತ್ರಾಂಶಗಳನ್ನು ಬದಲಿಸುವುದಕ್ಕೆ ಕನಿಷ್ಟವೆಂದರೂ 100 ದಿನಗಳ ಕಾಲ ಕಾಲಾವಕಾಶ ಬೇಕಾಗುತ್ತದೆ. ನಿಜವಾದ ಕೆಟ್ಟ ಅನುಭವವೆಂದರೆ ಬ್ಯಾಂಕ್ ಗಳಲ್ಲಿ ದುಡ್ಡಿದ್ದರೂ, ಅದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಎಂದು ಓವೈಸಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com