
ಚೆನ್ನೈ: ಅನಾರೋಗ್ಯದಿಂದ ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸತತ 2 ತಿಂಗಳ ಬಳಿಕ ಐಸಿಯುನಿಂದ ವಿಶೇಷ ಕೊಠಡಿಗೆ ವೈದ್ಯರು ಸ್ಥಳಾಂತರಿಸಿದ್ದಾರೆ.
ಕಿಡ್ನಿ ಸಮಸ್ಯೆ, ಜ್ವರ ಹಾಗೂ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದ ಜಯಲಲಿತಾ ಅವರ ಆರೋಗ್ಯ ಸುಧಾರಿಸಿದ್ದು, ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ವ್ಯವಸ್ಥೆ ವೆಂಟಿಲೇಟರ್ ಅನ್ನು ವೈದ್ಯರು ತೆಗೆದಿದ್ದಾರೆ. ಇದೀಗ ಜಯಾ ಸಾಮಾನ್ಯದಂತೆ ಉಸಿರಾಟ ನಡೆಸುತ್ತಿದ್ದು, ಅವರ ಉಸಿರಾಟದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇನ್ನು ಜಯಲಲಿತಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಐಎಡಿಎಂಕೆ ಪಕ್ಷದ ವಕ್ತಾರರಾದ ಸಿ.ಪೊನ್ನಿಯನ್ ಅವರು, ಜಯಲಲಿತಾ ಅವರು ಅಪೊಲೊ ಆಸ್ಪತ್ರೆಯ ಐಸಿಯು ಘಟಕದಿಂದ ವಿಶೇಷ ಕೊಠಡಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ನಿನ್ನೆಯಷ್ಟೇ ಅಪೊಲೊ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಜಯಲಲಿತಾ ಅವರಿಗೆ ವೆಂಟಿಲೇಟರ್ ತೆಗೆಯಲಾಗಿದ್ದು, ವೆಂಟಿಲೇಟರ್ ಇಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದಿನಕ್ಕೆ ಕೇವಲ 15 ನಿಮಿಷ ಮಾತ್ರ ವೆಂಟಿಲೇಟರ್ ಅಳವಡಿಸಲಾಗುತ್ತದೆ' ಎಂದು ತಿಳಿಸಿದ್ದರು.
ಆಸ್ಪತ್ರೆ ಮುಂದೆ ಮುಂದುವರೆದ ಜಯಾ ಅಭಿಮಾನಿಗಳ ದಂಡು
ಇನ್ನು ಜಯಾ ಆಸ್ಪತ್ರೆಗೆ ದಾಖಲಾಗಿ 2 ತಿಂಗಳುಗಳೇ ಕಳೆದರೂ ಆಪೊಲೋ ಆಸ್ಪತ್ರೆ ಮುಂದೆ ನೆರೆದಿರುವ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆ ಮುಂದೆ ನೆರೆದು ಜಯಾ ಆರೋಗ್ಯಕ್ಕಾಗಿ ಪೂಜೆ, ಹೋಮ-ಹವನಗಳನ್ನು ನಡೆಸುತ್ತಿದ್ದಾರೆ.
Advertisement