ಸೀಮಿತ ದಾಳಿಗೆ ಪಾಕ್ ಸೇಡು: ಒಟ್ಟಾರೆ 18 ಯೋಧರ ಹತ್ಯೆ; 1 ಯೋಧನ ಸೆರೆ; ಇಬ್ಬರ ರುಂಡ ಕತ್ತರಿಸಿ ಕ್ರೌರ್ಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ ಬಳಿಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಲೇ ಬಂದಿರುವ ಪಾಕಿಸ್ತಾನ ಈ ವರೆಗೂ 18 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ ಬಳಿಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಲೇ ಬಂದಿರುವ ಪಾಕಿಸ್ತಾನ ಈ ವರೆಗೂ 18 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಿದೆ.

ಗಡಿಯಲ್ಲಿ ಉಗ್ರ ಚಟುವಟಿಕೆಗಳು ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಸೆಪ್ಟಂಬರ್ 28/28 ರಂದು ಭಾರತೀಯ ಸೇನೆ ಪಿಒಕೆಯಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಸೇನೆ ನಡೆಸಿದ್ದ ಸೀಮಿತ ದಾಳಿ ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಮೇಲೆ ಭಾರೀ ಪರಿಣಾಮ ಬೀರಿತ್ತು.

ಭಾರತದ ಈ ನಡೆಗೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತಲ್ಲದೇ, ಭಾರತ ಯಾವುದೇ ರೀತಿಯ ಸೀಮಿತ ದಾಳಿಯನ್ನೂ ನಡೆಸಿಲ್ಲ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಿತ್ತು. ಸೀಮಿತ ದಾಳಿ ಕುರಿತು ಪಾಕಿಸ್ತಾನದಲ್ಲಿಯೇ ಗೊಂದಲ ಹೇಳಿಕೆಗಳು ವ್ಯಕ್ತವಾಗಿದ್ದವು.

ಒಂದೆಡೆ ಸ್ವತಃ ಪಾಕಿಸ್ತಾನದ ಪ್ರಧಾನಮಂತ್ರಿಗಳೇ ಭಾರತ ಸೀಮಿತ ದಾಳಿ ನಡೆಸಿಲ್ಲ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಸೇನಾ ಅಧಿಕಾರಿಗಳೇ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿತ್ತು ಎಂದು ಹೇಳಿತ್ತು. ತನ್ನ ರಾಷ್ಟ್ರದಲ್ಲಿ ಏನಾಗಿದೆ ಎಂಬುದು ತನಗೇ ಅರಿವಿಲ್ಲದಂತೆ ಪಾಕಿಸ್ತಾನ ವರ್ತಿಸಿತ್ತು. ಸೇನೆಯ ಸೀಮಿತ ದಾಳಿಯನ್ನು ಒಪ್ಪಿಕೊಳ್ಳದೆಯೇ ಕಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿ, ಪರೋಕ್ಷವಾಗಿ ಸೀಮಿತ ದಾಳಿ ನಡೆದಿದ್ದು ನಿಜ ಎಂದು ಒಪ್ಪಿಕೊಂಡಿತ್ತು. ಬಹಿರಂಗವಾಗಿಯೇ ಭಾರತಕ್ಕೆ ದಿಟ್ಟ ಉತ್ತರವನ್ನು ನೀಡುತ್ತೇವೆ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂಬ ಹೇಳಿಕೆ ಸೀಮಿತ ದಾಳಿಯನ್ನು ಪಾಕಿಸ್ತಾನ ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ.

ಅಂತರಾಷ್ಟ್ರೀಯ ಗಡಿಯಲ್ಲಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಪದೇ ಪದೇ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸಲು ಆರಂಭಿಸಿತ್ತು. ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುವುದು, ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ಗಳ ದಾಳಿ ನಡೆಸಲು ಆರಂಭಿಸಿತ್ತು. ಈ ವೇಳೆ ಉಭಯ ಸೇನಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಈಗಲೂ ಗಡಿಯಲ್ಲಿ ಅಪ್ರಚೋದಿತ ದಾಳಿಗಳು ನಡೆಯುತ್ತಲೇ ಇದೆ.

ತನ್ನ ಸೇಡಿನಂತೆಯೇ ಪಾಕಿಸ್ತಾನ ಈ ವರೆಗೂ 18 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಅಲ್ಲದೆ, ಇಬ್ಬರು ಯೋಧರ ಶಿರಚ್ಛೇದನ ಮಾಡುವ ಮೂಲಕ ಪಾಕಿಸ್ತಾನ ತನ್ನ ವಿಕೃತ ಮುಖವನ್ನು ವಿಶ್ವದೆದುರು ಬಹಿರಂಗಪಡಿಸಿದೆ. ಓರ್ವ ಯೋಧನನ್ನು ಪಾಕಿಸ್ತಾನ ತನ್ನ ವಶದಲ್ಲಿರಿಸಿಕೊಂಡಿದ್ದು, ಯೋಧನನ್ನು ತವರು ಮನೆಗೆ ಕರೆತರಲು ಸಾಕಷ್ಟು ಪ್ರಯತ್ನಗಳೂ ನಡೆಯುತ್ತಿವೆ.

ಅಕ್ಟೋಬರ್ 16 ರಂದು ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಯೋಧ ಸಿಪಾಯ್ ಸುದೀಸ್ ಕುಮಾರ್ ಅವರು ಹುತಾತ್ಮರಾಗಿದ್ದರು.

ಅಕ್ಟೋಬರ್ 20 ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಯೋಧ ಗುರ್ನಾಮ್ ಸಿಂಗ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಕ್ಟೋಬರ್ 22 ರಂದು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

ಅಕ್ಟೋಬರ್ 23 ರಂದು ಆರ್ ಎಸ್ ಪುರ ಸೆಕ್ಟರ್ ಬಳಿಯಿರುವ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ದಾಳಿ ವೇಳೆ ಬಿಎಸ್ಎಫ್ ಯೋಧ ಸುಶೀಲ್ ಕುಮಾರ್ ಅವರು ಹುತಾತ್ಮರಾಗಿದ್ದರು.

ಇದಾದ ನಾಲ್ಕು ದಿನಗಳ ಬಳಿ ಜಮ್ಮು ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ಎಫ್ ಮುಖ್ಯ ಪೇದೆ ಜಿತೇಂದರ್ ಕುಮಾರ್ ಅವರು ಹುತಾತ್ಮರಾಗಿದ್ದರು.

ಅಕ್ಟೋಬರ್ 27 ರಂದು ಕುಪ್ವಾರ ಜಿಲ್ಲೆಯ ತಂಗ್ಧಾನ್ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿ ವೇಳೆ ಯೋಧ ಸಂದೀಪ್ ಸಿಂಗ್ ರಾವತ್ ಅವರು ಹುತಾತ್ಮರಾಗಿದ್ದರು.

ಇವಿಷ್ಟೂ ಕಳೆದ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನ ಹತ್ಯೆ ಮಾಡಿದ ಭಾರತೀಯ ಯೋಧರ ಹತ್ಯೆಯ ಸಂಖ್ಯೆಗಳಾಗಿವೆ. ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆದ ಶೆಲ್ ದಾಳಿ ಗಡಿಯಲ್ಲಿರುವ ನಾಗರೀಕರ ಮೇಲೂ ಪರಿಣಾಮ ಬೀರಿದ್ದು, ಸೀಮಿತ ದಾಳಿ ಬಳಿಕ ಪಾಕಿಸ್ತಾನ ಈ ವರೆಗೂ 300 ಬಾರಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದೆ.

ಕದನ ವಿರಾಮ ಉಲ್ಲಂಘನೆ ವೇಳೆ ನಡೆದ ಶೆಲ್ ದಾಳಿಗೆ 12 ನಾಗರೀಕರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ, ಸೆಪ್ಟೆಂಬರ್ 30 ರಂದು ಪಾಕಿಸ್ತಾನ ಸೇನೆ ಭಾರತೀಯ ಯೋಧ ಚಂದು ಬಾಬು ಲಾಲ್ ಚೌಹಾಣ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದೆ. ಚಂದು ಬಾಬು ಲಾಲ್ ಅವರು ಗಡಿ ದಾಟಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಇದಲ್ಲದೆ, ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇನೆ ಮೂವರು ಭಾರತೀಯ ಯೋಧರನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಓರ್ವ ಯೋಧನ ಶಿರಚ್ಛೇದ ಮಾಡುವ ವಿಕೃತ ಮೆರೆದಿತ್ತು. ಇದಾದ ಬಳಿಕವೂ ಗಡಿಯಲ್ಲಿ ಪಾಕಿಸ್ತಾನ ತನ್ನ ಪುಂಡಾಟವನ್ನು ಮುಂದವರೆಸಿದ್ದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗ ಭಾರತೀಯ ಸೇನೆ ಪಾಕಿಸ್ತಾನ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಅಂತರಾಷ್ಟ್ರೀಯ ಗಡಿಯಲ್ಲಿ ಇದೇ ಮೊದಲ ಬಾರಿಗೆ ಶೆಲ್ ದಾಳಿ ನಡೆಸಿತ್ತು. ದಾಳಿಯಲ್ಲಿ ಪಾಕಿಸ್ತಾನ ಸೇನೆಯ 3 ಸೈನಿಕರನ್ನು ಹತ್ಯೆ ಮಾಡಿತ್ತು.

ಕದನ ವಿರಾಮ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದ್ದು, ಸೇನೆ ನಡೆಸಿದ ಶೆಲ್ ಗಳ ದಾಳಿಗೆ ಪಾಕಿಸ್ತಾನ ಭಾರೀ ನಷ್ಟ ಸಂಭವಿಸಿದೆ. ಪಾಕಿಸ್ತಾನ ಸೇನೆಯ ಸಾಕಷ್ಟು ಸೇನಾ ಶಿಬಿರಗಳನ್ನು ನಾಶಪಡಿಸಿದ್ದೇವೆಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ 18 ಗಂಟೆಗಳಲ್ಲಿ ಪಾಕಿಸ್ತಾನ ಸೇನೆಯ ಸೈನಿಕನೊಬ್ಬ ಗುಲ್ಮಾರ್ಗ್ ಮತ್ತು ನೌಗಾಮ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಎರಡು ಬಾರಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದ. ಉನ್ನತ ಮಟ್ಟದ ಗಡಿಯಲ್ಲಿ ಭದ್ರತೆ ನೀಡಿದ್ದ ಪಾಕಿಸ್ತಾನದ ಸೈನಿಕ ಉಗ್ರರನ್ನು ಗಡಿ ದಾಟಿಸುತ್ತಿದ್ದ ಈ ವೇಳೆ ಸೇನೆ ದಿಟ್ಟ ಉತ್ತರ ನೀಡಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com