ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದ ಋತುಮಾನದಲ್ಲಿ ಇದೇ ಮೊದಲ ಸಲ ಇಷ್ಟೊಂದು ಮಂಜು ದಟ್ಟವಾಗಿ ಕವಿದಿದ್ದು ಅನೇಕ ಕಡೆ ರಸ್ತೆಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಇದರಿಂದ ವಾಹನ ಸವಾರರಿಗೆ, ಸಂಚಾರಿಗಳಿಗೆ ತೊಂದರೆಯಾಗಿದೆ.
ಪಂಜಾಬ್, ಹರ್ಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮೊದಲಾದ ಕಡೆ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಕನಿಷ್ಠ ಉಷ್ಣಾಂಶ 11 ಡಿಗ್ರಿಯಾಗಿದೆ ಎಂದು ವರದಿಯಾಗಿದೆ. ಪಂಜಾಬ್ ಮತ್ತು ಹರ್ಯಾಣಗಳಲ್ಲಿ 7ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇದರಿಂದಾಗಿ ದೆಹಲಿಯಲ್ಲಿ ಸಂಚಾರ ನಿಧಾನವಾಗಿದೆ. ದೆಹಲಿ-ನೊಯ್ಡಾ ಮತ್ತು ದೆಹಲಿ-ಗುರುಂಗಾವ್ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಿಧಾನಗತಿಯಲ್ಲಿ ಸಾಗುತ್ತಿದ್ದು ಕೆಲವು ವಿಮಾನಗಳ ಸಂಚಾರ ದಟ್ಟ ಮಂಜಿನಿಂದಾಗಿ ತಡವಾಗಿದೆ. ರಸ್ತೆ ಮತ್ತು ರೈಲು ಸಂಚಾರಕ್ಕೂ ಅಡಚಣೆಯುಂಟಾಗಿದೆ.
ಇಂದು ಬೆಳಗ್ಗೆ ದೆಹಲಿಯಿಂದ 50 ಕಿಲೋ ಮೀಟರ್ ದೂರದಲ್ಲಿ ಸೋನಿಪತ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಅಸ್ಪಷ್ಟತೆಗೆ ಕಾರುಗಳು ಢಿಕ್ಕಿ ಹೊಡೆದು ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಮುಂದಿನ ಒಂದು ವಾರದವರೆಗೆ ದೆಹಲಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ಇದೇ ರೀತಿಯ ವಾತಾವರಣ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.