
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಉಗ್ರರ ದಾಳಿ ಮೂಲಕ ಎಂದಿಗೂ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನ ರವಾನಿಸುತ್ತಿದೆ ಎಂದು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ನಗ್ರೋಟಾ ಉಗ್ರರ ದಾಳಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಗ್ರೋಟಾ ದಾಳಿ ಮೂಲಕ ಪಾಕಿಸ್ತಾನ ತನ್ನ ಜಿಹಾದ್ ಉಗ್ರವಾದದ ನೀತಿಯಿಂದ ಹಾಗೂ ಭಾರತದ ಮೇಲೆ ದಾಳಿ ನಡೆಸುತ್ತಲೇ ಇರುತ್ತೇವೆಂಬ ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.
ಇದೀಗ ಪಾಕಿಸ್ತಾನಕ್ಕೂ ಭಾರತ ಸಂದೇಶ ರವಾನಿಸುವ ಸಮಯ ಎದುರಾಗಿದೆ. ಪಾಠ ಕಲಿಸದೇ ಹೋದರೆ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ. ಪಾಕಿಸ್ತಾನ ನಮ್ಮನ್ನು ಪರೀಕ್ಷಿಸುತ್ತಿದ್ದು, ಇದಕ್ಕೆ ಭಾರತ ಪ್ರತ್ಯುತ್ತ ನೀಡಲೇಬೇಕಿದೆ. ಉಗ್ರರ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಇತರೆ ಸರ್ಕಾರಕ್ಕಿಂತ ನಮ್ಮ ಸರ್ಕಾರ ವಿಭಿನ್ನವಾಗಿದೆ ಎಂಬುದನ್ನು ತಿಳಿಸಬೇಕಿದೆ. ನನಗೆ ಹೊಡೆದರೆ, ಪ್ರತಿಯಾಗಿ ಬಲವಾಗಿ ನಾನು ನಿನಗೆ ಹೊಡೆಯುತ್ತೇನೆಂಬ ನೀತಿ ನಮ್ಮದು ಎಂದು ತಿಳಿಸಿದ್ದಾರೆ.
ನಗ್ರೋಟಾ ದಾಳಿ ಮೂಲಕ ಪಾಕಿಸ್ತಾನ ಎಂದಿಗೂ ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ. ಹೀಗಾಗಿಯೇ ಜಿಹಾದ್ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದೆ. ಹಲವು ವರ್ಷಗಳಿಂದಲೂ ಪಾಕಿಸ್ತಾನ ಈ ನೀತಿಯನ್ನು ಪಾಲಿಸಿಕೊಂಡು ಬಂದಿದೆ. ರಹೀಲ್ ಶರೀಫ್ ಅವರೂ ಕೂಡ ಇದೇ ನೀತಿಯನ್ನೇ ಅನುಸರಿಸಿದ್ದರು. ಇದೀಗ ನೂತನ ಸೇನಾ ಮುಖ್ಯಸ್ಥರೂ ಕೂಡ ಇದೇ ನೀತಿಯನ್ನು ಪಾಲಿಸಿದ್ದು, ಭಾರತಕ್ಕೆ ಸಂದೇಶವನ್ನು ರವಾನಿಸಿದ್ದಾರೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಸಮಯ ಎದುರಾಗಿದೆ ಎಂದಿದ್ದಾರೆ.
Advertisement