
ನಗ್ರೋಟಾ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರು ದಾಳಿ ಮಾಡಿದ ಪ್ರಕರಣದಲ್ಲಿ ಭದ್ರತಾ ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೇನಾಧಿಕಾರಿಗಳು ಬುಧವಾರ ತನಿಖೆ ಆರಂಭಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪೊಲೀಸರು ಸಮವಸ್ತ್ರದಲ್ಲಿ ಬಂದಿರುವ ಉಗ್ರರ ಗುಂಪೊಂದು ನಗ್ರೋಟಾದಲ್ಲಿನ '16 ಕೋರ್' ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಬೆಳಿಗ್ಗೆ 5.30 ಸುಮಾರಿಗೆ ಬಂದಿರುವ ಉಗ್ರರು ಇದ್ದಕ್ಕಿದ್ದಂತೆ ಸೇನಾ ಶಿಬಿರದ ಮೇಲೆ ಗ್ರೆನೇಡ್ ಗಳ ದಾಳಿ ನಡೆಸಿದ್ದರು. ಸೇನಾಧಿಕಾರಿಗಳ ಕಚೇರಿಗೆ ನುಗ್ಗಿರುವ ಅಧಿಕಾರಿಗಳನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು.
ಈ ವೇಳೆ ಉಗ್ರರ ಸದೆಬಡಿಯಲು ಸೇನೆ ಕಾರ್ಯಾಚರಣೆಗಿಳಿದಿತ್ತು. ಯೋಧರು ಹಾಗೂ ಉಗ್ರರ ನಡುವೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ದಾಳಿಯಲ್ಲಿ ಬೆಂಗಳೂರು ಮೂಲದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹಿತ 7 ಮಂದಿ ಯೋಧರು ಹುತಾತ್ಮರಾಗಿದ್ದರು.
ದಾಳಿ ಕುರಿತಂತೆ ಸೇನೆ ಪ್ರತಿಕ್ರಿಯೆ ನೀಡಿದ್ದು, ಘಟನಾ ಸ್ಥಳವನ್ನೂ ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಶಿಬಿರ ಅತ್ಯಂತ ಭದ್ರತೆಯನ್ನು ಒದಗಿಸಿರುವ ಪ್ರದೇಶವಾಗಿದ್ದು, ಸೇನಾ ಶಿಬಿರದಲ್ಲಿ 1,000ಕ್ಕೂ ಸೇನಾಧಿಕಾರಿ ನೆಲೆಯೂರಿದ್ದಾರೆ. ಇಷ್ಟೊಂದು ಭದ್ರತೆಯಿರುವ ಸೇನಾ ನೆಲೆಯೊಳಗೆ ಉಗ್ರರು ಹೇಗೆ ಬರಲು ಸಾಧ್ಯವಾಯಿತು ಎಂಬುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದಾಳಿ ಕುರಿತಂತೆ ಈಗಾಗಲೇ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಮಾಹಿತಿ ನೀಡಿದ್ದು, ಇಂದು ನಗ್ರೋಟಾಗೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಇನ್ನು ದಾಳಿಗೆ ಸೇನಾ ಶಿಬಿರದಲ್ಲಿದ್ದ ಭದ್ರತಾ ಲೋಪಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಸೇನಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತನಿಖೆ ನಂತರವಷ್ಟೇ ಸತ್ಯಾಂಶ ಬಹಿರಂಗಗೊಳ್ಳಬೇಕಿದೆ. ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೇನಾ ಪಡೆ ಕಾರ್ಯಾಚರಣೆ ಮುಂದುವರೆಸುತ್ತಿದೆ ಎಂದು ಸೇನಾ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
Advertisement