
ನವದೆಹಲಿ: ಭಾರತೀಯ ಟಿವಿ ಚಾನೆಲ್ ಗಳ ಮೇಲೆ ನಿಷೇಧ ಹೇರುವ ಮೂಲಕ ಪಾಕಿಸ್ತಾನ ತನ್ನಲ್ಲಿರುವ ಭಯವನ್ನು ತನ್ನ ದೇಶದ ನಾಗರೀಕರ ಮುಂದೆಯೇ ಬಹಿರಂಗಪಡಿಸಿಕೊಂಡಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಅವರು, ಪಾಕಿಸ್ತಾನ ದೇಶ ಬಹಳ ಚಿಕ್ಕ ದೇಶವಾಗಿದೆ. ಜೊತೆಗೆ ಅದರ ಮನಸ್ಥಿತಿ ಹಾಗೂ ಹೃದಯ ಕೂಡ ಚಿಕ್ಕದಾಗಿದೆ. ತನ್ನ ಬಗ್ಗೆ ವ್ಯಕ್ತವಾಗುವ ಟೀಕೆ, ವಿಮರ್ಶೆಯನ್ನು ಅದು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಭಾರತೀಯ ಚಿತ್ರಗಳು ಹಾಗೂ ಧಾರಾವಾಹಿಗಳನ್ನು ಪಾಕಿಸ್ತಾನ ಜನತೆ ಪ್ರತೀನಿತ್ಯ ನೋಡುತ್ತಿದೆ. ಇದನ್ನು ಗಮನಿಸಿದ ಪಾಕಿಸ್ತಾನ, ಇದೀಗ ಭಾರತೀಯ ಟಿವಿ ಚಾನೆಲ್ ಗಳ ಪ್ರಸಾರದ ಮೇಲೆ ನಿಷೇಧ ಹೇರಿದೆ. ಈ ಮೂಲಕ ತನ್ನಲ್ಲಿರುವ ಭಯವನ್ನು ತನ್ನ ನಾಗರೀಕರ ಮುಂದೆಯೇ ಬಹಿರಂಗಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಭಾರತೀಯ ಟಿವಿ ವಾಹಿನಿಗಳ ಮೇಲೆ ಪಾಕಿಸ್ತಾನ ನಿಷೇಧ ಹೇರಿರುವ ಕುರಿತಂತೆ ಮತ್ತೊಬ್ಬ ಬಿಜೆಪಿ ನಾಯಕ ಶ್ರೀಕಾಂತ್ ಶರ್ಮಾ ಎಂಬುವವರು ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ನಿಷೇಧ ಹೇರಬೇಕೆಂದಿದ್ದರೆ ಪಾಕಿಸ್ತಾನ ಬಹಿರಂಗವಾಗಿಯೇ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ ತನ್ನ ಉಗ್ರ ಕ್ಯಾಂಪ್ ಗಳ ಮೇಲೆ ನಿಷೇಧ ಹೇರಬಹುದಿತ್ತು. ಭಾರತೀಯ ಚಾನೆಲ್ ಗಳ ನಿಷೇಧ ಹೇರಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ.
Advertisement