ವಾಘಾಗಡಿಯಲ್ಲಿ ಪಾಕಿಗಳ ಪುಂಡಾಟ; ಧ್ವಜ ಕಾರ್ಯಕ್ರಮದ ವೇಳೆ ಭಾರತ ವಿರೋಧಿ ಘೋಷಣೆ, ಕಲ್ಲೆಸೆತ

ವಾಘಾ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ಭಾನುವಾರ ಸಂಜೆ ನಡೆದ ಧ್ವಜ ಕಾರ್ಯಕ್ರಮದ ವೇಳೆ ಭಾರತ ವಿರೋಧಿ ಘೋಷಣೆ ಕೂಗಿದ್ದಲ್ಲದೇ ಭಾರತೀಯರಿದ್ದ ಗ್ಯಾಲರಿಯತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಾಘಾ ಗಡಿಯಲ್ಲಿ ಧ್ವಜ ಕಾರ್ಯಕ್ರಮ (ಸಂಗ್ರಹ ಚಿತ್ರ)
ವಾಘಾ ಗಡಿಯಲ್ಲಿ ಧ್ವಜ ಕಾರ್ಯಕ್ರಮ (ಸಂಗ್ರಹ ಚಿತ್ರ)

ಅಮೃತಸರ: ವಾಘಾ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ಭಾನುವಾರ ಸಂಜೆ ನಡೆದ ಧ್ವಜ ಕಾರ್ಯಕ್ರಮದ ವೇಳೆ ಭಾರತ ವಿರೋಧಿ ಘೋಷಣೆ ಕೂಗಿದ್ದಲ್ಲದೇ  ಭಾರತೀಯರಿದ್ದ ಗ್ಯಾಲರಿಯತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಉರಿ ಉಗ್ರ ದಾಳಿ ಮತ್ತು ಪಿಒಕೆಯಲ್ಲಿ ಭಾರತೀಯ ಸೇನಾ ಪಡೆಯ ಸೀಮಿತ ದಾಳಿ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ರದ್ದಾಗಿದ್ದ ಧ್ವಜ ಕಾರ್ಯಕ್ರಮಕ್ಕೆ ನಿನ್ನೆ ಮತ್ತೆ ಚಾಲನೆ ನೀಡಲಾಗಿತ್ತು. ಈ  ವೇಳೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಅರ್ಧಗಂಟೆ ಮೊದಲು ಪಾಕಿಸ್ತಾನದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲ ಪುಂಡ ಪಾಕಿ ಪ್ರಜೆಗಳು ಇದ್ದಕ್ಕಿದ್ದಂತೆಯೇ ಭಾರತದ ವಿರುದ್ಧ ಘೋಷಣೆಗಳನ್ನು  ಕೂಗಿದ್ದಾರೆ. ಅಲ್ಲದೆ ನೋಡ ನೋಡುತ್ತಿದ್ದಂತೆಯೇ ಭಾರತೀಯ ಪ್ರೇಕ್ಷಕರಿದ್ದ ಗ್ಯಾಲರಿಯತ್ತ ಕಲ್ಲು ತೂರಾಟ ಮಾಡಿದ್ದಾರೆ ಎಂದು ವಾಘಾ ಗಡಿಯ ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಪುಂಡ ಪಾಕಿಗಳು ಘೋಷಣೆ ಕೂಗುತ್ತಿದ್ದ ವೇಳೆ ಅಲ್ಲಿದ್ದ ಪಾಕಿಸ್ತಾನಿ ಸೈನಿಕರು ಮೂಕ ಪ್ರೇಕ್ಷ ಕರಾಗಿದ್ದರು ಎಂದು ಅಲ್ಲಿ ಪಹರೆ ನಡೆಸುತ್ತಿದ್ದ ಭಾರತೀಯ ಯೋಧರೊಬ್ಬರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ರೇಂಜರ್ಸ್ ಗಳನ್ನು ಕರೆದು ಚರ್ಚಿಸಿರುವ ಭಾರತೀಯ ಸೇನಾಧಿಕಾರಿಗಳು ಘಟನೆಯ ಎಲ್ಲ ವಿವರ ನೀಡಿದ್ದಾರೆ. ಅಂತೆಯೇ ಘಟನೆ ಕುರಿತಂತೆ ತಮ್ಮ  ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com