
ನವದೆಹಲಿ: ಸೀಮಿತ ದಾಳಿ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಯಾವುದೇ ದಾಖಲೆಗಳನ್ನು ಎಂದಿಗೂ ಕೇಳಿಲ್ಲ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಆಪ್ ವಕ್ತಾರ ಆಶುತೋಷ್ ಅವರು, ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ದೆಹಲಿ ಸರ್ಕಾರ ಎಂದಿಗೂ ರಾಜಕೀಯ ಆಟ ಆಡಲು ಯತ್ನಿಸಿಲ್ಲ. ಕೇಂದ್ರ ಹಾಗೂ ನಮ್ಮ ನಡುವೆ ಯಾವುದೇ ರೀತಿಯ ವೈಮನಸ್ಸಿದ್ದರೂ ಅದನ್ನೆಲ್ಲಾ ಬದಿಗಿಟ್ಟು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಿಟ್ಟ ಹೆಜ್ಜೆ ಆಪ್ ಬೆಂಬಲ ಸೂಚಿಸಿದೆ ಎಂದು ಹೇಳಿದ್ದಾರೆ.
ಕಳೆದ 4-5 ದಿನಗಳಿಂದಲೂ ಪಾಕಿಸ್ತಾನ ಭಾರತೀಯ ಸೇನೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಮಾಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಬೇಕಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ ಎಂದಿಕೂ ಪ್ರಧಾನಿಯವರ ಬೆನ್ನಿಗೆ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆವರು ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವ ಕುರಿತಂತೆ ಕೇಂದ್ರದ ಬಳಿ ದಾಖಲೆಗಳನ್ನು ಕೇಳಿದ್ದಾರೆಂಬ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೇಜ್ರಿವಾಲ್ ಅವರು ದಾಖಲೆ ಕೇಳಿದ್ದಾರೆಂಬ ಸಂದೇಶ ವಿಡಿಯೋದಲ್ಲಿ ಎಲ್ಲಿದೆ. ಕೇಜ್ರಿವಾಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತೇವೆಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ನಮ್ಮ ದೇಶದಲ್ಲಿರುವ ದೇಶಭಕ್ತರನ್ನು ನಂಬದೆ, ಬಿಜೆಪಿಯವರು ಪಾಕಿಸ್ತಾನದ ಮಾಧ್ಯಮಗಳ ಮೇಲೆ ನಂಬಿಕೆಯಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Advertisement