
ನವದೆಹಲಿ: ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಸತತ ಹಿನ್ನಡೆಗಳ ನಡುವೆಯೇ ಮಂಗಳವಾರ ಪ್ರಕಟವಾದ ತೀರ್ಪು ಕೊಂಚ ಆಶಾದಾಯಕವಾಗಿದೆ ಎಂಬ ಅಭಿಪ್ರಾಯ ಮೂಡಿರುವಂತೆಯೇ ಕರ್ನಾಟಕದ ಪರ ವಾದ ಮಂಡಿಸಿದ್ದ ಫಾಲಿ ನಾರಿಮನ್ ನೇತೃತ್ವದ ಕಾನೂನು ತಂಡ ಕರ್ನಾಟಕ ಜನತೆಗೆ ಧನ್ಯವಾದ ಹೇಳಿದೆ.
ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕರ್ನಾಟಕ ಕಾನೂನು ತಂಡದ ಪರವಾಗಿ ಮಾತನಾಡಿದ ಮೋಹನ್ ವೆಂಕಟೇಶ್ ಕಾತರಕಿ "ಕಾವೇರಿ ಕಾನೂನು ಸಮರದ ಅತ್ಯಂತ ಕಷ್ಟದ ಕಾಲದಲ್ಲಿ ತಮ್ಮ ಬೆನ್ನಿಗೆ ನಿಂತು ಬೆಂಬಲಿಸಿದ್ದೀರಿ. ಒತ್ತಡದ ನಡುವೆಯೂ ನಮ್ಮೊಂದಿಗೆ ನಿಂತ ಕರ್ನಾಟಕ ಜನತೆಗೆ ತಾವು ಮೊದಲು ಧನ್ಯವಾದ ಹೇಳುತ್ತೇವೆ. ಕೆಲ ಅಪಕ್ವ ರಾಜಕಾರಣಿಗಳು ಮತ್ತು ವಕೀಲರು ಮಾಡಿರುವ ಟೀಕೆ ಟಿಪ್ಪಣಿಗಳು, ನಿಂದನೆ ಮತ್ತು ದುರ್ವರ್ತನೆಯಿಂದಾಗಿ ನಮ್ಮ ಕಾನೂನು ತಂಡವನ್ನು ಕೆಡವಿಹಾಕಿತ್ತು. ಅಲ್ಲದೆ ಪ್ರಕರಣವನ್ನು ದುರ್ಬಲಗೊಳಿಸುವಂತೆ ಮಾಡಿತ್ತು. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದರು.
ಇದೇ ವೇಳೆ ಅಕ್ಟೋಬರ್ 18ರಂದು ನಡೆಯಲಿರುವ ವಿಚಾರಣೆ ತಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ನ್ಯಾಯಮಂಡಳಿಯ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಿವಿಲ್ ಅರ್ಜಿಗಳ ವಿಚಾರಣೆ ನಡೆಯಲಿದೆ. ಹೀಗಾಗಿ ಈ ಹಿಂದೆಂದಿಗಿಂತಲೂ ಅಂದು ನಡೆಯುವ ವಿಚಾರಣೆಗೆ ತಮ್ಮ ಬೆಂಬಲ ಅತ್ಯಗತ್ಯ ಎಂದು ಮೋಹನ್ ವೆಂಕಟೇಶ್ ಕಾತರಕಿ ಹೇಳಿದರು.
Advertisement