

ನವದೆಹಲಿ: ಒಂದೆಡೆ ಪಾಕಿಸ್ತಾನ ಭಾರತೀಯ ಸೇನೆ ಸೀಮಿತ ದಾಳಿಯೇ ನಡೆಸಿಲ್ಲ ಎಂದು ಮಾನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಅಧಿಕಾರಿಗಳೇ ಸೀಮಿತ ದಾಳಿ ನಡೆದದ್ದು ನಿಜ ಎಂದು ಸತ್ಯ ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.
ಖಾಸಗಿ ಮಾಧ್ಯಮವೊಂದು ನಡೆಸಿರುವ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರ್ಪುರದ ಎಸ್ ಪಿ (ವಿಶೇಷ ತನಿಖಾ ವಿಭಾಗ) ಸೀಮಿತ ದಾಳಿ ಕುರಿತಂತೆ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದು, ಮಾತುಕತೆ ವೇಳೆ ಭಾರತೀಯ ಸೇನೆ ನಿರ್ದಿಷ್ಟ ದಾಳಿಯಲ್ಲಿ 12 ಮಂದಿ ಸತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ದಾಳಿಯಲ್ಲಿ ಐವರು ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆಂದು ಅವರು ಹೇಳಿಕೊಂಡಿದ್ದಾರೆ. ಸೆ.29ರ ರಾತ್ರಿ ಭಾರತೀಯ ಸೇನೆ ಭಿಂಬೇರ್ ನಲ್ಲಿರುವ ಸಮಾನಾ, ನೀಲಂನಲ್ಲಿರುವ ಡುಧ್ನಿಯಾಲ್, ಪೂಂಚ್ ನ ಹಜೀರಾ ಮತ್ತು ಹಥಿಯಾನ್ ಬಾಲಾದ ಕಯಾನಿ ಪ್ರದೇಶಗಳನ್ನು ನಾಶಪಡಿಸಿದ್ದಾರೆ. ದಾಳಿಯಲ್ಲಿ ಉಗ್ರರು ಹತ್ಯೆಯಾಗಿದ್ದಾರೆ.
ಭಾರತೀಯ ಸೇನೆ ಸೀಮಿತ ದಾಳಿ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಪಾಕಿಸ್ತಾನ ಸೇನೆ ಆಗಮಿಸಿತ್ತು. ನಂತರ ಸ್ಥಳದಲ್ಲಿದ್ದ ಮೃತದೇಹಗಳನ್ನು ಸ್ಥಳಾಂತರ ಮಾಡಿದ್ದರು. ನಂತರ ಮೃತದೇಹಗಳನ್ನು ದಫನ ಮಾಡಲಾಗಿತ್ತು ಎಂದಿದ್ದಾರೆ.
ಇದಲ್ಲದೆ, ಪಾಕಿಸ್ತಾನ ಸೇನೆ ಉಗ್ರರಿಗೆ ಸಹಾಯ ಮಾಡುತ್ತಿರುವ ವಿಚಾರವನ್ನು ಇದೇ ವೇಳೆ ಬಹಿರಂಗ ಪಡಿಸಿರುವ ಅವರು, ಪಾಕಿಸ್ತಾನ ಸೇನೆ ಕೆಲ ಭಯೋತ್ಪಾದಕರನ್ನು ಎಲ್ಒಸಿ ಬಳಿ ಕರೆತಂದು, ಗಡಿ ರೇಖೆ ದಾಟಲು ಅವರಿಗೆ ಸಹಾಯ ಮಾಡುತ್ತಾರೆಂದು ಹೇಳಿಕೊಂಡಿದ್ದಾರೆ.