

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ಸ್ಥಿರವಾಗಿದೆ, ಅವರಿಗೆ ಪ್ರಜ್ಞೆ ಇದೆ, ಹೀಗಾಗಿ ರಾಜ್ಯಕ್ಕೆ ತಾತ್ಕಾಲಿಕ ಸಿಎಂ ನೇಮಿಸುವ ಅವಶ್ಯಕತೆ ಇಲ್ಲ ಎಂದು ಎಐಎಡಿಎಂಕೆ ತಿಳಿಸಿದೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎಐಎಡಿಎಂಕೆ ವಕ್ತಾರ ಅವಧಿ ಕುಮಾರ್, ಅಮ್ಮನ ಆರೋಗ್ಯ ಸ್ಥಿರವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯ ಅವಶ್ಯಕತೆ ಇಲ್ಲ, ತಾತ್ಕಾಲಿಕ ಸಿಎಂ ನ ಅವಶ್ಯಕತೆ ಕೂಡ ಇಲ್ಲ ಎಂದು ಹೇಳಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಅವರು ಸಿಎಂ ಹುದ್ದೆಯಲ್ಲಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದಾದರೇ, ಹಣಕಾಸು ಮಂತ್ರಿ ಪನ್ನೀರ್ ಸೆಲ್ವಂ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ