

ಲಖನೌ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ವಿಚಾರವಾಗಿ ಬಿಜೆಪಿ ವಿರುದ್ಧ ರಾಜಕೀಯ ಲಾಭ ಪಡೆಯುವ ಯತ್ನದ ಆರೋಪ ಮಾಡಿದ್ದ ರಾಹುಲ್ ಗಾಂಧಿಗೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಕ್ತದ ದಲ್ಲಾಳಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಸೇನಾ ಕಾರ್ಯಾಚರಣೆ ವಿಷಯವಾಗಿ ಬಿಜೆಪಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, "ರಾಹುಲ್ ಗಾಂಧಿ ಅಂತಹ ಹೇಳಿಕೆ ನೀಡಿದ್ದಾರೆ ಎಂದರೆ ಸಾಕಷ್ಟು ಯೋಚನೆ ಮಾಡಿ ಹೇಳಿದ್ದಾರೆ. ಅದರ ಹಿಂದೆ ಕಾರಣಗಳಿರುತ್ತವೆ" ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿನ ಪದ ಪ್ರಯೋಗದ ಬಗ್ಗೆ ಮತ್ತಷ್ಟು ಗಮನ ಹರಿಸಬೇಕಿತ್ತು ಎಂದು ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ದಾಳಿಯ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದವು ಹಾಗೆಯೇ ಮುಂದೆಯೂ ಬೆಂಬಲಿಸುತ್ತವೆ, ಆದರೆ ಬಿಜೆಪಿ ಅದನ್ನು ರಾಜಕೀಯಗೊಳಿಸಿದ್ದು ದುರದೃಷ್ಟಕರ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಅವರ ಪರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಅಖಿಲೇಶ್ ಯಾದವ್ ಹೇಳಿಕೆ ದುರದೃಷ್ಟಕರ ಎಂದು ಹೇಳಿದೆ.