
ನವದೆಹಲಿ: ಸೀಮಿತ ದಾಳಿಯನ್ನು ಸ್ವತಃ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರೇ ಅಲ್ಲಗೆಳೆದಿದ್ದಾರೆಂಬ ಪಾಕಿಸ್ತಾನ ಮಾಧ್ಯಮಗಳ ಸುಳ್ಳು ಸುದ್ಧಿಗಳ ವಿರುದ್ಧ ಭಾರತ ಶುಕ್ರವಾರ ಕಿಡಿಕಾರಿದೆ.
ಪಾಕಿಸ್ತಾನ ಮಾಧ್ಯಮಗಳ ಸುಳ್ಳು ಸುದ್ಧಿಗಳ ವಿರುದ್ಧ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ. ಭಾರತೀಯ ವಿದೇಶಾಂಗ ವಕ್ತಾರ ಜೈಶಂಕರ್ ಅವರು ಸೀಮಿತ ದಾಳಿಯನ್ನು ಅಲ್ಲಗೆಳೆದಿದ್ದಾರೆಂಬ ಪಾಕಿಸ್ತಾನ ಮಾಧ್ಯಮಗಳ ವರದಿ ಸುಳ್ಳಾಗಿದ್ದು, ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ದ ನ್ಯೂಸ್ ಇಂಟರ್ ನ್ಯಾಷನಲ್ ದೈನಿಕ ಪತ್ರಿಕೆಯೊಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಜರ್ಮನ್ ರಾಯಭಾರಿಯೊಂದಿಗೆ ಸಭೆಯೊಂದರಲ್ಲಿ 'ಪಾಕಿಸ್ತಾನ ಆಕ್ರಮಿತ ಕಾಶ್ಮೀರ'ದಲ್ಲಿ ಭಾರತ ಸೀಮಿತ ದಾಳಿಯನ್ನು ನಡೆಸಿಯೇ ಇಲ್ಲ ಎಂದು ಹೇಳಿದ್ದಾರೆಂದು ವರದಿ ಮಾಡಿದೆ.
ಸೆ.28ರಾತ್ರಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿರುವುದರ ಕುರಿತಂತೆ ವಿದೇಶೀ ರಾಯಭಾರಿಗಳ ಒಂದು ಸಮೂಹದೊಂದಿಗೆ ನಡೆಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಭಾಗಿಯಾಗಿದ್ದರು. ಸಭೆಯಲ್ಲಿ ನಡೆದ ಮಾತುಕತೆ ವೇಳೆ ಜೈಶಂಕರ್ ಅವರು ಸೀಮಿತ ದಾಳಿ ನಡೆದೇ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಜರ್ಮನಿಯ ರಾಯಭಾರಿ ಮಾರ್ಟಿನ್ ನೇ ಅವರು ಕೂಡ ಉಪಸ್ಥಿತರಿದ್ದರು ಎಂದು ಹೇಳಿಕೊಂಡಿದೆ.
ಪಾಕಿಸ್ತಾನ ಮಾಧ್ಯಮಗಳ ಈ ವರದಿಯನ್ನು ತಳ್ಳಿಹಾಕಿರುವ ವಿಕಾಸ್ ಸ್ವರೂಪ್ ಅವರು, ಸೀಮಿತ ದಾಳಿ ನಡೆದ ಸಂದರ್ಭದಲ್ಲಿ ಅಥವಾ ದಾಳಿ ನಂತರವಾಗಲೀ ಜೈಶಂಕರ್ ಅವರು ಮಾರ್ಟಿನ್ ಅವರೊಂದಿಗೆ ಸೀಮಿತ ದಾಳಿ ಕುರಿತಾಗಿ ಯಾವುದೇ ರೀತಿಯ ಮಾತುಕತೆಗಳನ್ನು ನಡೆಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement