ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಬೇಕು: ಶಿವಪಾಲ್ ಯಾದವ್ ಆಗ್ರಹ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರು ಹೇಳಿದ್ದಾರೆ.
ಶಿವಪಾಲ್ ಯಾದವ್ ಹಾಗೂ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
ಶಿವಪಾಲ್ ಯಾದವ್ ಹಾಗೂ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
Updated on: 

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್  ಅವರು ಹೇಳಿದ್ದಾರೆ.

ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನಲೆಯಲ್ಲಿ ಇಂದು ಪಕ್ಷದ ಮುಖಂಡರ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಅತ್ತ ಸಿಎಂ ಅಖಿಲೇಶ್ ಯಾದವ್  ತಾವು ಬೇರೆ ಪಕ್ಷ ಕಟ್ಟುವ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರೆ ಇದಕ್ಕೆ ಪ್ರತಿಕ್ರಿಯಿಸಿದ ಶಿವಪಾಲ್ ಯಾದವ್ ಅಖಿಲೇಶ್ ಅವರು ಬೇರೆ ಪಕ್ಷ ಕಟ್ಟುವ ಕುರಿತು ಮಾತನಾಡಿದ್ದಾರೆ. ಇದಕ್ಕೆ ನಾನು  ಗಂಗಾಜಲವನ್ನು ಕೈಯಲ್ಲಿ ಹಿಡಿದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಶಮನಕ್ಕೆ ಮುಲಾಯಂ ಸಿಂಗ್ ಯಾದವ್ ಅವರು  ಮುಖ್ಯಮಂತ್ರಿಯಾಗುವುದೊಂದೇ ಪರಿಹಾರ ಎಂದೂ ಅವರು ಆಗ್ರಹಿಸಿದ್ದಾರೆ.

ಪಕ್ಷ ಕಟ್ಟುವಲ್ಲಿ ನನ್ನ ಶ್ರಮವೇನೂ ಇಲ್ಲವೇನೂ.. ಇಲ್ಲ ಸಲ್ಲದ ಆರೋಪಗಳಿಗೆ ಕಿವಿಕೊಟ್ಟು ನನ್ನನ್ನು ಮಂತ್ರಿ ಮಂಡಲದಿಂದ ವಜಾ ಮಾಡಲಾಗಿದೆ. ಪಕ್ಷದ ಹಿರಿಯ ಮುಖಂಡನಾಗಿದ್ದರೂ ಕೂಡ  ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪ್ರತಿಯೊಂದು ಆದೇಶವನ್ನೂ ಪಾಲಿಸಿದ್ದೇನೆ. ಹೀಗಿದ್ದೂ ನನ್ನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿದ್ದೇಕೆ ಎಂದು ಶಿವಪಾಲ್ ಯಾದವ್ ಅವರು  ಪ್ರಶ್ನಿಸಿದರು.

ಸಮಾಜವಾದಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಶಮನದ ವಿಚಾರವಾಗಿ ಚರ್ಚಿಸಲು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಈ  ವೇಳೆ ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಯಾದವ್ ಅವರ ಪರಸ್ಪರ ಆಲಂಘಿಸಿಕೊಂಡರಾದರೂ, ಮತ್ತೆ ಭಾಷಣದ ವೇಳೆ ಒಬ್ಬರ ವಿರುದ್ಧ ಒಬ್ಬರು ಮಾತನಾಡುವ ಮೂಲಕ ತಮ್ಮ  ಆಕ್ರೋಶ ಮುಂದವರೆಸಿದರು.

ಕೈ ಕೈ ಮಿಲಾಯಿಸಿಕೊಂಡ ಅಖಿಲೇಶ್, ಶಿವಪಾಲ್ ಬೆಂಬಲಿಗರು
ಮತ್ತೊಂದು ಬೆಳವಣಿಗೆಯಲ್ಲಿ ಅತ್ತ ಕಚೇರಿಯೊಳಗೆ ಸಮಾಜವಾದಿ ಪಕ್ಷದ ಮುಖಂಡರು ಸಭೆ ನಡೆಸುತ್ತಿರುವಂತೆಯೇ ಹೊರಗೆ ಅಖಿಲೇಶ್ ಹಾಗೂ ಶಿವಪಾಲ್ ಯಾದವ್ ಅವರ ಬೆಂಬಲಿಗರು  ಪರಸ್ಪರ ಕೈ ಕೈ ಮಿಲಾಯಿಸಿದ ಪ್ರಸಂಗ ಕೂಡ ನಡೆಯಿತು. ಸಭೆಗೆ ಶಿವಪಾಲ್ ಯಾದವ್ ಅವರು ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಅಖಿಲೇಶ್ ಬೆಂಬಲಿಗರು, ಶಿವವಪಾಲ್ ವಿರುದ್ಧ  ಘೋಷಣೆಗಳನ್ನು ಕೂಗಿದರು. ಈ ವೇಳೆ ಅಲ್ಲೇ ಇದ್ದ ಶಿವಪಾಲ್ ಬೆಂಬಲಿಗರ ಆಗಮನದೊಂದಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಆಗ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು  ನಿಯಂತ್ರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com