
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಮತ್ತು ಅರ್ನಿಯಾ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿಗೆ 6 ಮಂದಿಗೆ ಗಾಯವಾಗಿರುವ ಘಟನೆ ಗುರುವಾರ ನಡೆದಿದೆ.
ಕಳೆದ ರಾತ್ರಿಯಿಂದಲೂ ಗಡಿಯಲ್ಲಿ ಪಾಕಿಸ್ತಾನ ಸೇನೆ ತನ್ನ ಪುಂಡಾಟವನ್ನು ಮುಂದುವರೆಸುತ್ತಲೇ ಇದ್ದು, ಭಾರತೀಯ ಸೇನೆಯ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ದಾಳಿ ಪರಿಮಾಮ ಗಡಿಯಲ್ಲಿನ ಬಿಎಸ್ಎಫ್ ಯೋಧರ 12 ಕೇಂದ್ರಗಳು ನಾಶಗೊಂಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೀರಾನಗರ ಸೆಕ್ಟರ್ ನ ಬೊಬಿಯಾ ಪ್ರದೇಶದಲ್ಲಿ ಉಗ್ರರು ಗಡಿ ನುಸುಳಲು ಯತ್ನಿಸಿದ್ದು, ಸೇನೆ ಮೇಲೆ ಶೆಲ್ ಗಳ ದಾಳಿಯನ್ನು ನಡೆಸಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡುವ ಮೂಲಕ ಭಾರತೀಯ ಸೇನೆ ಉಗ್ರರ ಒಳನುಸುಳುವ ಪ್ರಯತ್ನವನ್ನು ವಿಫಲಗೊಳ್ಳುವಂತೆ ಮಾಡಿದ್ದಾರೆ.
ಸೀಮಿತ ದಾಳಿ ನಂತರ ಗಡಿಯಲ್ಲಿ ಉದ್ನಿಗ್ನ ವಾತಾವರಣ ಮುಂದುವರೆದಿದ್ದು. ಅ.19-20 ರಂದು ಕೂಡ ಗಡಿಯಲ್ಲಿರುವ ಜನರು ಮನಸ್ಸಿಗೆ ಇಷ್ಟವಿಲ್ಲದಿದ್ದರೂ ಸ್ಥಳಾಂತರಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಇದೀಗ ಗಡಿಯಲ್ಲಿರುವ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ. ದಾಳಿಯಾಗುವ ಸಮಯದಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆಯೂ ಜನರಿಗೆ ಸೂಚನೆ ನೀಡಿದ್ದಾರೆ.
ಗಡಿಯಲ್ಲಿ ಮುಂದುವರೆದ ಉದ್ನಿಗ್ನ ವಾತಾವರಣ ಇದೀಗ ಅಲ್ಲಿನ ರೈತರು ಕಂಗಾಲಾಗುವಂತೆ ಮಾಡಿದೆ. ದಾಳಿಯಿಂದಾಗಿ ಸಾರ್ವಜನಿಕರ ಹಲವಾರು ಆಸ್ತಿಪಾಸ್ತಿಗಳು ನಾಶಗೊಳ್ಳುವಂತಾಗಿದೆ.
Advertisement