
ಇಸ್ಲಾಮಾಬಾದ್: ಪಾಕಿಸ್ತಾನದ ಸೇಡಿಗೆ ಗುರಿಯಾಗಿ ಬೇಹುಗಾರಿಕೆ ಆರೋಪ ಹೊತ್ತಿದ್ದ ಭಾರತೀಯ ರಾಯಭಾರಿ ಸುರ್ಜಿತ್ ಸಿಂಗ್ ಅವರು ಶನಿವಾರ ಪಾಕಿಸ್ತಾನವನ್ನು ತೊರೆದಿದ್ದಾರೆಂದು ಭಾನುವಾರ ಮೂಲಗಳಿಂದ ತಿಳಿದುಬಂದಿದೆ.
ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದಾರೆಂದು ಹೇಳಿ ಕೆಲ ದಿನಗಳ ಹಿಂದಷ್ಟೇ ದೆಹಲಿ ಪೊಲೀಸರು ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿತ್ತು. ಅಲ್ಲದೆ, ಗೂಡಾಚಾರ ನಡೆಸುತ್ತಿರುವ ಪಾಕಿಸ್ತಾನ ಅಧಿಕಾರಿಗಳು 48 ಗಂಟೆಯೊಳಗಾಗಿ ಭಾರತ ತೊರೆಯುವಂತೆ ಸೂಚನೆ ನೀಡಿತ್ತು.
ಇದರ ಬೆನ್ನಲ್ಲೇ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಪಾಕಿಸ್ತಾನ, ಏಟಿಗೆ ಏದುರೇಟು ಎಂಬಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗೆ ನೋಟಿಸ್ ವೊಂದನ್ನು ಜಾರಿ ಮಾಡಿತ್ತು. ಸುರ್ಜಿತ್ ಸಿಂಗ್ ಅವರು ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿತ್ತು.
ಅಲ್ಲದೆ, ಭಾರತ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಭಾರತೀಯ ರಾಯಭಾರಿಗಳು 48 ಗಂಟೆಯೊಳಗಾಗಿ ಪಾಕಿಸ್ತಾನ ತೊರೆಯುವಂತೆ ತಿಳಿಸಿತ್ತು.
Advertisement