
ನವದೆಹಲಿ: ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಸಮಾಜವಾದಿ ಪಕ್ಷದ ಸಂಸದ ಮುನಬ್ಬಾರ್ ಆಪ್ತ ಕಾರ್ಯದರ್ಶಿ ಬಗ್ಗೆ ಅಧಿಕಾರಿಗಳು ಭಾನುವಾರ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಕಳೆದ 18 ವರ್ಷಗಳಿಂದಲೂ ಫರ್ಹತ್ ಖಾನ್ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಸತ್ಯಾಂಶ ಇದೀಗ ಬೆಳಕಿಗೆ ಬಂದಿದೆ.
ಗೂಢಚಾರ್ಯೆ ನಡೆಸುತ್ತಿದ್ದ ಎಂದು ಹೇಳಿ ನಿನ್ನೆಯಷ್ಟೇ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಮುನಬ್ಬಾರ್ ಅವರ ಆಪ್ತ ಕಾರ್ಯದರ್ಶಿ ಫರ್ಹತ್ ಖಾನ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಫರ್ಹತ್ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ ಫರ್ಹತ್ ನನ್ನು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲಯ ಫರ್ಹತ್ ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಫರ್ಹತ್ ಖಾನ್ ಬಗೆಗಿನ ಸ್ಫೋಟಕ ಮಾಹಿತಿಗಳನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದು, ಕಳೆದ 18 ವರ್ಷಗಳಿಂದಲೂ ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಈತ ಪಾಕಿಸ್ತಾನ ರಾಯಭಾರಿ ಮೆಹ್ಮೂದ್ ಅಖ್ತರ್ ನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ. ಪಾಕಿಸ್ತಾನ ರಾಯಭಾರಿಗಳೊಂದಿಗೆ ಸಂಕೇತ ಪದಗಳೊಂದಿಗೆ ಮಾತನಾಡುತ್ತಿದ್ದ. ಈ ಮೂಲಕ ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಪಾಕಿಸ್ತಾನ ರಾಯಭಾರಿಗಳಿಗೆ ನೀಡುತ್ತಿದ್ದ ಎಂದು ಹೇಳಿದ್ದಾರೆ.
ಇದಲ್ಲದೆ, ಫರ್ಹತ್ ಪಾಕಿಸ್ತಾನ ಗುಪ್ತಚರ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿ, ಕಳೆದ 18 ವರ್ಷಗಳಿಂದಲೂ ಭಾರತದ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ. ಪ್ರತೀಯೊಂದು ಮಾಹಿತಿ ಹಾಗೂ ದಾಖಲೆಗಳಿಗೂ ರು.2 ಲಕ್ಷ ಹಣವನ್ನು ಈತನಿಗೆ ಪಾಕಿಸ್ತಾನ ಗುಪ್ತಚರ ಇಲಾಖೆ ನೀಡುತ್ತಿತ್ತು ಎಂದು ಅಧಿಕಾರಿಗಳು ನ್ಯಾಯಾಧೀಶರ ಬಳಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಫರ್ಹತ್ ಕೆಲ ಸತ್ಯಾಂಶಗಳನ್ನು ಬಾಯ್ಬಿಟ್ಟಿದ್ದಾನೆ. ಇನ್ನು ಮತ್ತಷ್ಟು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement