
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕಿಸ್ತಾನ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ 19 ವರ್ಷದ ಯುವತಿ ಸಾವನ್ನಪ್ಪಿ, ಇಬ್ಬರು ನಾಗರಿಕರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ನೌಶೆರಾ, ಅರ್ನಿಯಾ ಮತ್ತು ರಾಮ್ಗರ್ಹ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಗಡಿಯಲ್ಲಿರುವ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ಗಳ ದಾಳಿಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಗೆ ರಾಮ್ಗರ್ಹ್ ಸೆಕ್ಟರ್ ನ 19 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆಂದು ಹೇಳಲಾಗುತ್ತಿದೆ. ಇದರಂತೆ ಸಾಂಬಾ ಜಿಲ್ಲೆಯಲ್ಲಿಯೂ ಇಬ್ಬರು ನಾಗರೀಕರಿಗೆ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಸೇನೆ ದಾಳಿಗೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಡೀಪುರದ ಅಜರ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ತಿಳಿದುಬಂದಿದ್ದು, ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
Advertisement