
ಭೋಪಾಲ್: ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸಿಮಿ ಉಗ್ರರನ್ನು ತಡೆಯಲು ಹೋಗಿ ಹತ್ಯೆಯಾದ ಪೇದೆ ರಮಾಶಂಕರ್ ಅವರು, ಮಗಳ ಮದುವೆ ನೋಡಿ ಕಣ್ತುಂಬಿಕೊಳ್ಳಲು ಸಿದ್ಧತೆಯನ್ನು ನಡೆಸುತ್ತಿದ್ದರು ಎಂಬ ವಿಚಾರ ಇದೀಗ ತಿಳಿದುಬಂದಿದೆ.
ಭೋಪಾಲ್ ನ ಕೇಂದ್ರ ಜೈಲಿನಲ್ಲಿ 8 ಸಿಮಿ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಉಗ್ರರನ್ನು ತಡೆಯಲು ಹೋಗಿದ್ದ ರಮಾಶಂಕರ್ ಎಂಬ ಪೇದೆಯನ್ನು ಉಗ್ರರು ಹತ್ಯೆ ಮಾಡಿದ್ದರು. ಆಯುಧಗಳಾವುದೂ ಸಿಗದ ಕಾರಣ ತಮಗೆ ನೀಡಲಾಗಿದ್ದ ಊಟದ ಸಾಮಾಗ್ರಿಗಳನ್ನೇ ಆಯುಧವಾಗಿ ಬಳಸಿಕೊಂಡು ಉಗ್ರರು ರಮಾಶಂಕರ್ ಅವರನ್ನು ಹತ್ಯೆ ಮಾಡಿದ್ದರು.
ರಮಾಶಂಕರ್ ಅವರಿಗೆ ಶಂಭುನಾಥ್ (36), ಪ್ರಭುನಾಥ (32) ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ಗುವಾಹಟಿ ಹಾಗೂ ಹಿಸ್ಸಾರ್ ನಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಮಾಶಂಕರ್ ಅವರಿಗೆ 24 ವರ್ಷದ ಸೋನಿಯಾ ಎಂಬ ಹೆಣ್ಣು ಮಗಳಿದ್ದು, ಮಗಳ ಮದುವೆಯನ್ನು ನೋಡಿ ಕಣ್ತುಂಬಿಕೊಳ್ಳಲು ಸಿದ್ದತೆಯನ್ನು ನಡೆಸುತ್ತಿದ್ದರೆಂದು ರಮಾಶಂಕರ್ ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಸಂಬಂಧಿಕ ವಿಜಯ್ ಶಂಕರ್ ಎಂಬುವವರ ಜೊತೆಯಲ್ಲಿ ರಮಾಶಂಕರ್ ಅವರ ಮಗಳು ಸೋನಿಯಾ ಅವರ ಮದುವೆ ನಿಶ್ಚಯವಾಗಿತ್ತು. ಬರುವ ಡಿಸೆಂಬರ್ 9 ರಂದು ಮದುವೆಯನ್ನು ನಿಗದಿ ಮಾಡಲಾಗಿತ್ತು. ಮಗಳ ಮದುವೆಗಾಗಿ ಪೇದೆ ರಮಾಶಂಕರ್ ಅವರು ಸಿದ್ಧತೆಗಳನ್ನು ನಡೆಸುತ್ತಿದ್ದರು. ಅಷ್ಟರಲ್ಲಾಗಲೇ ದುರಂತ ಸಂಭವಿಸಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
Advertisement