

ಶ್ರೀನಗರ: ಕಳೆದ ಎರಡು ವರ್ಷಗಳಲ್ಲಿ(2014 ರಿಂದ) ಮೊದಲ ಬಾರಿಗೆ ಗಲಭೆ ಪೀಡಿತ ದಕ್ಷಿಣ ಕಾಶ್ಮೀರದ ಪುಲ್ವಾಮ, ಶೋಪೇನ್, ಕುಲ್ಗಾಮ್ ಹಾಗೂ ಅನಂತ್ ನಾಗ್ ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
ಭಾರತೀಯ ಸೇನಾ ಪಡೆ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಗಲಭೆ ಪೀಡಿತ ಜಿಲ್ಲೆಗಳಲ್ಲಿ ಭದ್ರತೆಯನ್ನು ಪರಿಶೀಲಿಸಿದ್ದು, ಜಿಲ್ಲಾಡಳಿತಗಳ ನೆರವಿಗೆ ಸೂಕ್ಷ್ಮವಾಗಿ ಸ್ಪಂದಿಸುವಂತೆ ಸೇನಾ ಪಡೆಯ ಯೋಧರಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚರ್ಚೆ ನಡೆಸಿ ಗಲಭೆ ಪೀಡಿತ ನಾಲ್ಕೂ ಜಿಲ್ಲೆಗಳಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಸೇನಾ ಪಡೆ ನಿಯೋಜನೆ ಮಾಡುವ ತೀರ್ಮಾನಕ್ಕೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಗಳಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಯನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವನಿ ಹತ್ಯೆಯಿಂದ ಮತ್ತಷ್ಟು ಕೆರಳಿರುವ ಪ್ರತ್ಯೇಕತಾವಾದಿಗಳು ಮಂಗಳವಾರ ನಡೆಯಲಿರುವ ಈದ್( ಬಕ್ರೀದ್) ದಿನದಂದು ಯುಎನ್ ಚಲೊ ಜಾಥಾಗೆ ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತ್ಯೇಕತಾವಾದಿಗಳು ಮತ್ತಷ್ಟು ಗಲಬೆಹ್ಗೆ ಪ್ರಚೋದನೆ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸೇನಾಪಡೆ ಅಧಿಕಾರಿಗಳು ಕಣಿವೆಯ ಜಿಲ್ಲೆಗಳಲ್ಲಿ ಮೊಬೈಲ್ ಸೇವೆಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಶ್ಮೀರದ ನಾಲ್ಕು ಜಿಲ್ಲೆಗಳೊಂದಿಗೆ ಗಡಿ ನಿಯಂತ್ರಣ ರೇಖೆ ಇರುವ ಪ್ರದೇಶಗಳಿಗೂ ಸೇನಾ ಪಡೆ ಮುಖ್ಯಸ್ಥರು ಭೇಟಿ ನೀಡಿ, ಭದ್ರತೆಯನ್ನು ಪರಿಶೀಲಿಸಿದ್ದಾರೆ.