
ಜಮ್ಮು: ಭಾರತದ ಸೌಹಾರ್ದತೆ, ಏಕತೆಗೆ ಧಕ್ಕೆ ತರುವ ಸಲುವಾಗಿ ಪಾಕಿಸ್ತಾನ ಪಿತೂರಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಅಪ್ರಚೋದಿತ ದಾಳಿಯನ್ನು ನಡೆಸುತ್ತಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ರವೀಂದರ್ ರೈನಾ ಅವರು, ಪೂಂಚ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ. ಗಡಿಯಲ್ಲಿ ಈಗಲೂ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ. ಕಾಶ್ಮೀರದಲ್ಲಿರುವ ಜನತೆ ಈಗಲೂ ಉಗ್ರರು ಮತ್ತು ಪ್ರತ್ಯೇಕತಾವಾದಿಗಳ ಭಯದಲ್ಲಿದ್ದಾರೆ. ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಇಸಿಸ್ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಿ ಭಾರತದ ಸೌಹಾರ್ದತೆ ಹಾಗೂ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಇದು ನಿಜಕ್ಕೂ ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ದೇಶದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರುಕಳಿಸಲು ಪಾಕಿಸ್ತಾನ ಇಚ್ಛಿಸುತ್ತಿಲ್ಲ. ಕಾಶ್ಮೀರದ ಮುಸ್ಲಿಮರು ಈದ್ ಹಬ್ಬವನ್ನು ಆಚರಿಸಲು ಅದು ಇಚ್ಛಿಸುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಜನತೆಗೆ ಪಾಕಿಸ್ತಾನ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಮುಸ್ಲಿಮರಿಗೆ ಹಾಗೂ ಮಾನವತಾವಾದಿಗೂ ಶತ್ರುವಾಗಿದೆ.
ಕಾಶ್ಮೀರ ವಿಚಾರದಲ್ಲಿ ಕೇಂದ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ. ಎಂದು ತಿಳಿಸಿದ್ದಾರೆ.
Advertisement