
ಚೆನ್ನೈ: 6,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯಕ್ಕೆ ಸೂಚಿಸಿದ್ದು, 6 ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಸಾಕಾಗುವುದಿಲ್ಲ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಹೇಳಿದೆ.
ಕಾವೇರಿ ವಿವಾದ ಕುರಿತಂತೆ ಮಂಗಳವಾರ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಕ್ತಾರ ಶರವಣನ್ ಅವರು, 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ, ನಮಗೆ 6 ಸಾವಿರ ಕ್ಯೂಸೆಕ್ಸ್ ನೀರು ಸಾಕಾಗುವುದಿಲ್ಲ. ನಾಲ್ಕು ವಾರಗಳೊಳಗಾಗಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ವಿಚಿತ್ರವಾದ ರಾಜಕೀಯ ಆಟಗಳು ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಂತರಿಕ ರಾಜಕೀಯ ನಡೆಯುತ್ತಿದೆ. ಏನೇ ಆದರೂ ಕರ್ನಾಟಕ ರಾಜ್ಯ ಸುಪ್ರೀಂ ಆದೇಶವನ್ನು ಒಪ್ಪಿಕೊಳ್ಳಬೇಕಿದೆ. ಕಾವೇರಿ ವಿವಾದ ಕುರಿತಂತೆ ಕೇಂದ್ರ ಸರ್ಕಾರ ಕೂಡ ಪ್ರವೇಶ ಮಾಡಬೇಕಿದೆ ಮತ್ತು ಸುಪ್ರೀಂ ಆದೇಶದಂತೆ ಶೀಘ್ರದಲ್ಲೇ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬೇಕಿದೆ. ಇದರಿಂದ ಬೆಂಗಳೂರಿನಲ್ಲಿ ನಡೆದ ಘಟನೆಯಂತೆ ಮುಂದೆ ನಾವು ಎಂದಿಗೂ ಯಾವುದೇ ಆಸ್ತಿ ಹಾಗೂ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗದಿರಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
Advertisement