
ಅಮರಾವತಿ: ಕಳೆದ 3 ದಿನಗಳಿಂದ ಸುರಿದ ಸತತ ಮಳೆಯಿಂದಾಗಿ ಆಂಧ್ರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿವಿಧ ಪ್ರಕರಣಗಳಲ್ಲಿ ಈ ವರೆಗೂ 8 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು, 2 ಸಾವಿರಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳಗಡೆಯಾಗಿವೆ. ಅಂತೆಯೇ 5 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದು, ಎನ್ ಡಿಆರ್ ಎಫ್ ತಂಡದ ನೆರವಿನ ಮೂಲಕ ಇವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೇವಲ ಗುಂಟೂರು ಮಾತ್ರವಲ್ಲದೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಜಂಟಿ ರಾಜಧಾನಿ ಹೈದರಾಬಾದ್ ಕೂಡ ಸತತ ಮಳೆಯಿಂದಾಗಿ ನಲುಗಿ ಹೋಗಿದ್ದು, ಇಲ್ಲಿನ ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಲ್ಲಿನ ತಗ್ಗು ಪ್ರದೇಶದಲ್ಲಿರು ಶಾಲಾ ಕಾಲೇಜು ಆವರಣದಲ್ಲಿ ಮಂಡಿಯವರೆಗೂ ನೀರು ನಿಂತಿದ್ದು, ಇದೇ ಕಾರಣಕ್ಕೆ ರಜೆ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಹೈದರಬಾದ್ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಹುಸೇನ್ ಸಾಗರ್ ನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸಮೀಪದ ಒಳಚರಂಡಿಗಳೆಲ್ಲವೂ ತುಂಬಿ ರಸ್ತೆ ಮೇಲೆ ಉಕ್ಕಿ ಹರಿಯುತ್ತಿವೆ. ಅಂತೆಯೇ ಇದೇ ಕೆರ ಸಮೀಪದ ಮೂರು ಪಾರ್ಕ್ ಗಳನ್ನು ಮುಂಜಾಗ್ರತಾ ಕ್ರಮವಾಗಿ ಜಿಹೆಚ್ಎಂಸಿ ಮುಚ್ಚಿದೆ.
ಅಂತೆಯೇ ಮಳೆಯಿಂದಾಗಿ ಸಿಕಿಂದರಾಬಾದ್ ಹಾಗೂ ಗುಂಟೂರು ನಡುವಿನ ರೈಲ್ವೇ ಮಾರ್ಗ ಹಾನಿಗೊಳಗಾಗಿದ್ದು, ಈ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಇಲ್ಲಿ ಯಾವುದೇ ರೈಲುಗಳ ಸಂಚರಿಸುತ್ತಿಲ್ಲ. ಈ ಮಾರ್ಗದ ಎಲ್ಲ ರೈಲುಗಳನ್ನು ಬೇರೆ ಮಾರ್ಗಕ್ಕೆ ವರ್ಗಾಯಿಸಲಾಗಿದೆ. ಇನ್ನು ಕ್ರೊಸೂರು ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಎಪಿಎಸ್ ಆರ್ ಟಿಸಿ ಬಸ್ ನಲ್ಲಿದ್ದ ಸುಮಾರು 35 ಪ್ರಯಾಣಿಕರನ್ನು ಸ್ಥಳೀಯ ಗ್ರಾಮಸ್ಥರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement