
ನವದೆಹಲಿ: ಉರಿ ಸೆಕ್ಟರ್ ನಲ್ಲಿ ನಡೆದ ಸೇನಾ ಪ್ರಧಾನ ಕಚೇರಿ ಮೇಲಿನ ಉಗ್ರರ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಸಂಭಾಲ್ ನ ಯುವಕರು, ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಮ್ಮ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರಗಳನ್ನು ಬರೆದಿದ್ದಾರೆ.
ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನ್ಯಾಯ ದೊರಕಬೇಕಿದ್ದು, ಟ್ವಿಟರ್ ನಲ್ಲಿ ಖಂಡನೆ ವ್ಯಕ್ತಪಡಿಸುವ ಪ್ರತಿಕ್ರಿಯೆಗಳ ನಮಗೆ ಅಗತ್ಯವಿಲ್ಲ. ಮಾತುಕತೆ ಬೇಕಿಲ್ಲ, ನೇರವಾಗಿ ಯುದ್ಧ ನಡೆಯಬೇಕಿದೆ. ರಕ್ತಕ್ಕೆ ರಕ್ತವೇ ಪ್ರತೀಕಾರ ಎಂದು ಯುವಕರು ಪತ್ರದಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ನವಾಜ್ ಶರೀಫ್ ಅವರು ಕೆಲ ಹೇಳಿಕೆಗಳನ್ನು ನೀಡಿದ್ದರು. ಉಗ್ರ ಬುರ್ಹಾನ್ ವಾನಿಯನ್ನು ಯುವ ನಾಯಕನೆಂದು ಹೇಳಿದ್ದರು. ಈ ರೀತಿಯ ಹೇಳಿಕೆಯ ನಂತರವಾದರೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Advertisement