ರಾಂಚಿ: ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಶನ್(ಎನ್ಟಿಪಿಸಿ) ಯೋಜನೆ ವಿರೋಧಿಸಿ ಕಾಂಗ್ರೆಸ್ ಶಾಸಕಿ ನಿರ್ಮಲಾ ದೇವಿ ನಡೆಸುತ್ತಿದ್ದ ರ್ಯಾಲಿ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ನಾಲ್ವರು ಸ್ಥಳೀಯರು ಮೃತಪಟ್ಟಿದ್ದಾರೆ.
ಜಾರ್ಖಂಡ್ ನ ಹಿಜಾರಿಭಾಗ್ ಜಿಲ್ಲೆಯಲ್ಲಿ ನಿರ್ಮಲಾ ದೇವಿ ಅವರು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಪೊಲೀಸರು ಶಾಸಕಿಯನ್ನು ಬಂಧಿಸಲು ಮುಂದಾದಾಗ ಸ್ಥಳೀಯರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಈ ವೇಳೆ ನಾಲ್ವರು ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ಐಜಿ ಎಂಎಚ್ ಭಾಟಿಯಾ ಹೇಳಿದ್ದಾರೆ.
ಸದ್ಯ ನಿರ್ಮಲಾ ದೇವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಭಾಟಿಯಾ ಅವರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಆರು ಮಂದಿ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಎರಡು ಪೊಲೀಸ್ ವಾಹನಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಿದ್ದಾರೆ.