ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧದ ಪ್ರತಿಭಟನೆ ಮುಂದುವರೆದಿದ್ದು, ಕಳೆದ ತಿಂಗಳು ಭದ್ರತಾ ಪಡೆ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆ ವೇಳೆ ಗಾಯಗೊಂಡಿದ್ದ ಯುವಕ ಶನಿವಾರ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಸೆಪ್ಟೆಂಬರ್ ಎರಡನೇ ವಾರದಲ್ಲಿ ಬದ್ಗಾಮ್ ಜಿಲ್ಲೆಯ ನರ್ಬಾಲ್ ಪ್ರದೇಶದಲ್ಲಿ ನಡೆದ ಘರ್ಷಣೆ ವೇಳೆ ಗಾಯಗೊಂಡಿದ್ದ ಮುಜಾಫರ್ ಅಹ್ಮದ್ ಪಂಡಿತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಎಎಂಎಚ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಪಂಡಿತ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಮಿನಾದ ಎಸ್ ಕೆ ಐಎಂಎಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಇಂದು ಬೆಳಗ್ಗೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಕಾಶ್ಮೀರದಲ್ಲಿ ಕೆಲವು ಕಡೆ ಪರಿಸ್ಥಿತಿ ಸುಧಾರಿಸಿದ್ದು, ಶ್ರೀನಗರದಲ್ಲಿ ಕರ್ಫ್ಯೂ ಅನ್ನು ಹಿಂಪಡೆಯಲಾಗಿದೆ. ಆದರೂ ಕಣಿವೆ ರಾಜ್ಯದಲ್ಲಿ ಸಾಮಾನ್ಯ ಜನಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.