ನಿಮ್ಮ ಸಿನಿಮಾಗಳಿಗೂ ನಿಷೇಧ ಹೇರುತ್ತೇವೆ-ಸಲ್ಮಾನ್'ಗೆ ಎಂಎನ್ಎಸ್ ಎಚ್ಚರಿಕೆ

ಪಾಕಿಸ್ತಾನ ಕಲಾವಿದರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬೆಂಬಲ ಸೂಚಿಸುವುದನ್ನು ಹೀಗೆ ಮುಂದುವರೆಸುತ್ತಿದ್ದರೆ ಅವರ ಚಿತ್ರಗಳಿಗೂ ಭಾರತದಲ್ಲಿ ನಿಷೇಧ ಹೇರಲಾಗುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ...
ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್

ಮುಂಬೈ: ಪಾಕಿಸ್ತಾನ ಕಲಾವಿದರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬೆಂಬಲ ಸೂಚಿಸುವುದನ್ನು ಹೀಗೆ ಮುಂದುವರೆಸುತ್ತಿದ್ದರೆ ಅವರ ಚಿತ್ರಗಳಿಗೂ ಭಾರತದಲ್ಲಿ ನಿಷೇಧ ಹೇರಲಾಗುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಶನಿವಾರ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಕಲಾವಿದರು ಭಾರತ ತೊರೆಯುವಂತೆ ಎಂಎನ್ಎಸ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಸಲ್ಮಾನ್ ಖಾನ್, ಪಾಕಿಸ್ತಾನ ಕಲಾವಿದರೇನು ಭಯೋತ್ಪದಾರಕರಲ್ಲ. ಕಲೆಗೂ ಭಯೋತ್ಪಾದನೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಕಲೆ ಹಾಗೂ ಭಯೋತ್ಪಾದನೆಯನ್ನು ಸಮಾನ ರೀತಿಯಲ್ಲಿ ನೋಡಬಾರದು. ಪಾಕಿಸ್ತಾನ ಕಲಾವಿದರನ್ನು ಭಯೋತ್ಪಾದನಕರಂತೆ ನೋಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಗಡಿಯಲ್ಲಿ ಯೋಧರು ನಮಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಯೋಧರು ಗಡಿಯಲ್ಲಿ ಹೋರಾಟ ಮಾಡುವುದನ್ನು ನಿಲ್ಲಿಸಿದ್ದೇ ಆದರೆ, ಮುಂದೆ ಏನಾಗುತ್ತದೆ? ಗಡಿಯನ್ನು ಕಾಯುವವರು ಯಾರು? ಸಲ್ಮಾನ್ ಖಾನ್ ಅವರೇ? ಅಥವಾ ಬಾಲಿವುಡ್ ಕಾಯುವುದೇ? ಎಂದು ಪ್ರಶ್ನಿಸಿದ್ದಾರೆ.

ಸಲ್ಮಾನ್ ಖಾನ್ ರಂತಹ ಜನರು ಮೊದಲು ದೇಶದ ಬಗ್ಗೆ ಚಿಂತಿಸಲಿ. ನಮ್ಮ ನಿರ್ಧಾರದಿಂದ ನಿಮಗೆ ಬಹಳ ಸಮಸ್ಯೆಯಾಗುತ್ತಿದ್ದರೆ. ನಾವು ಮೊದಲು ನಿಮ್ಮ ಸಿನಿಮಾಗಳಿಗೆ ಭಾರತದಲ್ಲಿ ನಿಷೇಧ ಹೇರುತ್ತೇವೆಂದು ಸಲ್ಮಾನ್ ಗೆ  ಠಾಕ್ರೆ ಎಚ್ಚರಿಸಿದ್ದಾರೆ.

ಕಾವೇರಿಗಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ನಿಂತು ಪ್ರತಿಭಟನೆ ನಡೆಸುತ್ತಿವೆ. ದೇಶಕ್ಕಾಗಿ ನಮ್ಮ ನಟರೇಕೆ ನಿಲ್ಲಬಾರದು. ನಟರಿಗೆ ಕೇವಲ ವ್ಯವಹಾರವಷ್ಟೇ ಮುಖ್ಯ. ಕಲೆಗೆ ಗಡಿಯಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಕಾವೇರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಜನತೆ ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಜನಿಕಾಂತ್ ಸೇರಿದಂತೆ ತಮಿಳುನಾಡಿನ ಹಲವು ನಟರು ಪ್ರತಿಭಟನೆ ನಡೆಸಿದ್ದರು. ತಮ್ಮ ರಾಜ್ಯದ ಹಕ್ಕಿಗಾಗಿ ಅಲ್ಲಿನ ಜನರು ಪ್ರತಿಭಟನೆಗಿಳಿಯುತ್ತಿದ್ದಾರೆ. ಆದರೆ, ಬಾಲಿವುಡ್ ನಟರೇಕೆ ದೇಶಕ್ಕಾಗಿ ಮುಂದೆ ಬರುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ 1.26 ಬಿಲಿಯನ್ ರಷ್ಟು ಜನಸಂಖ್ಯೆಯಿದೆ. ಇಲ್ಲಿರುವವರಲ್ಲೇ ಪ್ರತಿಭೆ ಹುಡುಕಲು ನಿಮಗೆ ಸಾಧ್ಯವಿಲ್ಲವೇ? ಪಾಕಿಸ್ತಾನದಿಂದ ಪ್ರತಿಭೆಗಳನ್ನು ಹುಡುಕಿ ಭಾರತಕ್ಕೆ ತರುತ್ತೀರಾ. ಅವರು ಯಾರು? ಪಾಕಿಸ್ತಾನದಲ್ಲಿರುವ ಕಲಾವಿದರಿಗೆ ತಮ್ಮ ದೇಶದ ಮೇಲೆ ಗೌರವವಿದೆಯೇ? ಎಂದು ಸಲ್ಮಾನ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com