ಭಾರತದಲ್ಲಿ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗಿಂತ "ಪ್ರೀತಿ"ಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು: ವರದಿ

ದೇಶದಲ್ಲಿ ಭಯೋತ್ಪಾದನೆ ದಾಳಿಗಳಿಗಿಂತ ಪ್ರೇಮ ಪ್ರಕರಣದಲ್ಲಿ ಸಾಯುವವರ ಸಂಖ್ಯೆ ಆರುಪಟ್ಟು ಹೆಚ್ಚು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಭಯೋತ್ಪಾದನೆ ದಾಳಿಗಳಿಗಿಂತ ಪ್ರೇಮ ಪ್ರಕರಣದಲ್ಲಿ ಸಾಯುವವರ ಸಂಖ್ಯೆ ಆರುಪಟ್ಟು ಹೆಚ್ಚು ಎಂಬ ವಿಚಾರ ಬೆಳಕಿಗೆ ಬಂದಿದೆ.

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ 2001ರಿಂದ 15 ಅವಧಿಯಲ್ಲಿ ಅಂದರೆ 15 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆದ ವಿವಿಧ ಭಯೋತ್ಪಾದನಾ ಪ್ರಕರಣಗಳಲ್ಲಿ ಸುಮಾರು 20 ಸಾವಿರ ಜನರು ಮೃತಪಟ್ಟಿದ್ದಾರೆ. ಆದರೆ  ವಿವಿಧ ಪ್ರೇಮ ಪ್ರಕರಣಗಳಲ್ಲಿ, ಸುಮಾರು 1.17 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ..!

ನಿವೃತ್ತ ಪ್ರೊಫೆಸರ್ ಉಮಾ ಚಕ್ರವರ್ತಿ ಅವರು ನೀಡಿರುವ ಈ ವರದಿಯನ್ವಯ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ವರ್ಷಗಳಲ್ಲಿ 38,585 ಕೊಲೆ, 79,189 ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, 2.6 ಲಕ್ಷ ಅಪಹರಣ  ಪ್ರಕರಣಗಳು ದಾಖಲಾಗಿವೆ. ಪ್ರೀತಿಗಾಗಿ ದಿನಕ್ಕೆ ಸರಾಸರಿ 7 ಕೊಲೆ, 14 ಆತ್ಮಹತ್ಯೆ, 47 ಅಪಹರಣಗಳು ನಡೆದಿವೆ. ಇದೇ ಅವಧಿಯಲ್ಲಿ ಭಯೋತ್ಪಾದನಾ ದಾಳಿಯಿಂದ 20 ಸಾವಿರ ನಾಗರಿಕರು ಹಾಗೂ ಸೈನಿಕರು ಮೃತಪಟ್ಟಿದ್ದಾರೆ.  ಇನ್ನು ಈ ಪರಿಯ ಸಾವಿಗೆ ಪ್ರಮುಖವಾಗಿ ದೇಶದಲ್ಲಿ ಗಾಢವಾಗಿರುವ ಜಾತಿ ವ್ಯವಸ್ಥೆ ಮತ್ತು ಪುರುಷ ಪ್ರಧಾನ ಸಮಾಜವೇ ಕಾರಣ ಎಂದು ಹೇಳಲಾಗುತ್ತಿದ್ದು, ಪರಸ್ಪರ ಆಯ್ಕೆಗೆ ಮನ್ನಣೆ ನೀಡದಿರುವುದೇ ಇಂತಹ ಪ್ರಕರಣಗಳು  ಹೆಚ್ಚಾಗಲು ಕಾರಣ. ಅಂತೆಯೇ ಅಂತರ್ಜಾತಿ ವಿವಾಹ ನಡೆದ ಸಂದರ್ಭದಲ್ಲಿ ಅಥವಾ ಪ್ರೇಮಿಗಳು ಅಂತರ್ಜಾತಿ ವಿವಾಹವಾಗಲು ಮುಂದಾದ ಸಂದರ್ಭದಲ್ಲಿ ಕೊಲೆಗಳು ನಡೆದ ಪ್ರಕರಣ ಹೆಚ್ಚಾಗಿ ದಾಖಲಾಗಿದೆ. ಪ್ರೀತಿಸಿ ಮೋಸ  ಹೋದ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪಶ್ಚಿಮ ಬಂಗಾಳಕ್ಕೆ ಅಗ್ರಸ್ಥಾನ, ಕರ್ನಾಟಕಕ್ಕೆ 10ನೇ ಸ್ಥಾನ
15 ವರ್ಷದ ಅವಧಿಯಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ್ದು, 2012ರ ವರದಿ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ 14 ವರ್ಷಗಳ ಅವಧಿಯಲ್ಲಿ 15 ಸಾವಿರ ಆತ್ಮಹತ್ಯೆ  ಪ್ರಕರಣಗಳು ಬೆಳಕಿಗೆ ಬಂದಿವೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು (9,405 ಆತ್ಮಹತ್ಯೆ) ಆಂಧ್ರ ಪ್ರದೇಶ , ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯ ಪ್ರದೇಶ ರಾಜ್ಯಗಳಿವೆ. ಈ ಎಲ್ಲ ರಾಜ್ಯಗಳಲ್ಲೂ ಸರಾಸರಿ  5 ಸಾವಿರಕ್ಕೂ ಅಧಿಕ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com