ಉ.ಪ್ರದೇಶ ಅರಣ್ಯದಲ್ಲಿ 'ಜಂಗಲ್ ಬುಕ್' ರಿಯಲ್ 'ಮೋಗ್ಲಿ': ಮಂಗನಂತೆ ವರ್ತಿಸುತ್ತಿರುವ ಮಗು!

ಕಲ್ಪನೆಯಾಧಾರಿತ 'ಜಂಗಲ್ ಬುಕ್' ಧಾರಾವಾಹಿ ಜನರ ಮೆಚ್ಚುಗೆಯನ್ನು ಗಳಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಉತ್ತರಪ್ರದೇಶದ ಅರಣ್ಯ ಪ್ರದೇಶವೊಂದರಲ್ಲಿ ದೊರಕಿದ ಬಾಲಕಿಯೊಬ್ಬಳು 'ಜಂಗಲ್ ಬುಕ್' ಮೋಗ್ಲಿಯಂತೆಯೇ ವರ್ತಿಸುತ್ತಿದ್ದಾಳೆ...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 'ಮೋಗ್ಲಿ' ಬಾಲಕಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 'ಮೋಗ್ಲಿ' ಬಾಲಕಿ
ಬಹರೈಚ್: ಕಲ್ಪನೆಯಾಧಾರಿತ 'ಜಂಗಲ್ ಬುಕ್' ಧಾರಾವಾಹಿ ಜನರ ಮೆಚ್ಚುಗೆಯನ್ನು ಗಳಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಉತ್ತರಪ್ರದೇಶದ ಅರಣ್ಯ ಪ್ರದೇಶವೊಂದರಲ್ಲಿ ದೊರಕಿದ ಬಾಲಕಿಯೊಬ್ಬಳು 'ಜಂಗಲ್ ಬುಕ್' ಮೋಗ್ಲಿಯಂತೆಯೇ ವರ್ತಿಸುತ್ತಿದ್ದಾಳೆ. 
ಯಾವ ಮನುಷ್ಯರ ಸಂಪರ್ಕವೂ ಇಲ್ಲದೆಯೇ ಮಂಗಗಳ ಜೊತೆ ಬೆಳೆದ 8 ವರ್ಷದ ಬಾಲಕಿಯೊಬ್ಬಳು ಉತ್ತರಪ್ರದೇಶದ ಬಹರೈಚ್ ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮಗುವನ್ನು ನಾಡಿಗೆ ತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ಸಬ್ ಇನ್ಸ್ ಪೆಕ್ಟರ್ ಸುರೇಶ್ ಯಾದವ್ ಎಂಬುವವರು ವನ್ಯ ಜೀವಿ ಸಂರಕ್ಷಣಾಲಯ ಕತರ್ನಿಯಾಘಾಠ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಂಗಗಳ ಮಧ್ಯೆ ಮಗು ಪತ್ತೆಯಾಗಿದೆ. 
ಈ ವೇಳೆ ಸುರೇಶ್ ಅವರು ಬಾಲಕಿಯನ್ನು ರಕ್ಷಣೆ ಮಾಡಲು ಹೊರಟಾಗ ಬಾಲಕಿ ಕೋತಿಗಳಂತೆಯೇ ಕಿರುಚಲು ಆರಂಭಿಸಿದ್ದಾಳೆ. ನಂತರ ಸುರೇಶ್ ಅವರು ಇತರ ಪೊಲೀಸರ ಜೊತೆಗೆ ಬಂದು ಬಾಲಕಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೋತಿಗಳೂ ಬಾಲಕಿಯ ರಕ್ಷಣೆ ಮಾಡಲು ಮುಂದಾಗಿವೆ. ಮಗು ಕೂಡ ಮನುಷ್ಯರನ್ನು ಕಂಡ ಕೂಡಲೇ ಬೆದರಿ ಮಂಗಗಳಂತೆಯೇ ವರ್ತಿಸಿದ್ದಾಳೆ, ಹರಸಾಹಸಪಟ್ಟು ಸಿಬ್ಬಂದಿಗಳು ಮಗುವನ್ನು ರಕ್ಷಣೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 
ಬಾಲಕಿ ಮಂಗಗಳಂತೆಯೇ ವರ್ತಿಸುತ್ತಿದ್ದು, ಪ್ರಾಣಿಗಳ ಮಧ್ಯೆ ಬೆಳೆದಿರುವುದಿರುವುದರಿಂದ ಆಕೆಗೆ ಮಾತು ಬರುತ್ತಿಲ್ಲ. ಮನುಷ್ಯರ ಭಾಷೆ ಕೂಡ ಆಕೆಗೆ ಅರ್ಥವಾಗುತ್ತಿಲ್ಲ. ಕೈಗಳನ್ನು ಬಳಸದೆಯೇ ಬಾಲಕಿ ನೇರವಾಗಿ ಬಾಯಿಯಿಂದಲೇ ಆಹಾರವನ್ನು ಸೇವಿಸುತ್ತಿದ್ದಾಳೆ, ಅಲ್ಲದೆ, ಪ್ರಾಣಿಗಳು ನಡೆಯುವಂತೆಯೇ ನಡೆಯುವಾಗ ಕೈಯನ್ನು ನೆಲಕ್ಕೆ ಊರಿ ಕಾಲಿನಲ್ಲಿ ಪ್ರಾಣಿಗಳು ನಡೆದಂತೆ ನಡೆಯುತ್ತಿದ್ದಾಳೆ. 
ಬಾಲಕಿ ಕೆಲವೊಮ್ಮೆ ತೀವ್ರವಾಗಿ ಕೋಪಗೊಳ್ಳುತ್ತಾಳೆ. ಎರಡು ತಿಂಗಳ ಹಿಂದೆ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ಪ್ರಾಣಿಗಳಂತೆಯೇ ವರ್ತಿಸುತ್ತಾಳೆ. ಮನುಷ್ಯರನ್ನು ಕಂಡ ಕೂಡಲೇ ಓಡಿ ಹೋಗುತ್ತಾಳೆ. ಆಕೆಯ ಚರ್ಮದ ಮೇಲೆ ಕಲೆಗಳಿವೆ. ಹಲವು ವರ್ಷಗಳಿಂದ ಆಕೆ ಪ್ರಾಣಿಗಳೊಂದಿಗೆ ಬದುಕುತ್ತಿದ್ದಳು ಎಂಬುದು ಇದರಿಂದ ತಿಳಿಯುತ್ತಿದೆ. ಇದೀಗ ಆಕೆ ಆರೋಗ್ಯವಾಗಿದ್ದಾಳೆಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಿ.ಕೆ., ಸಿಂಗ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com