'ಹಿಂದುತ್ವ' ಜೀವನದ ಹಾದಿ, ಭಾರತ 'ಹಿಂದೂ ರಾಷ್ಟ್ರ' ಪರಿಕಲ್ಪನೆಯಲ್ಲಿ ತಪ್ಪಿಲ್ಲ; ಸಿಎಂ ಯೋಗಿ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಅ ಅವರು ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹಿಂದುತ್ವ ಎಂಬುದು ಜೀವನದ ಹಾದಿಯಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಪರಿಕಲ್ಪನೆಯಲ್ಲಿ ತಪ್ಪಿಲ್ಲ ಎಂದು ಗುರುವಾರ ಹೇಳಿದ್ದಾರೆ...
ಲಖನೌ; ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹಿಂದುತ್ವ ಎಂಬುದು ಜೀವನದ ಹಾದಿಯಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಪರಿಕಲ್ಪನೆಯಲ್ಲಿ ತಪ್ಪಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಕೆ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಸಿದ್ಧಾಂತಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಅವರು, ಅಕ್ರಮ ಕಸಾಯಿಖಾನೆ ಹಾಗೂ ಗೋಹತ್ಯೆಗಳ ವಿರುದ್ಧದ ಕ್ರಮ, ಆ್ಯಂಟಿ ರೋಮಿಯೋ ಸ್ಕ್ಯಾಡ್, ಹಿಂದೂ ರಾಷ್ಟ್ರ ಕುರಿತಂತೆ ಮಾತನಾಡಿದ್ದಾರೆ.
ಸ್ವಾಮೀಜಿಗಳು ರಾಜಕೀಯಕ್ಕೆ ಪ್ರವೇಶ ಮಾಡಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜಕೀಯ ಇರುವುದು ಯೋಗಿಗಳಿಗಾಗಿ. ದೇಶಕ್ಕಾಗಿ ತ್ಯಾಗ ಮಾಡುವವರಿಗಾಗಿ. ದುರಾಸೆಯಿಂದ ಕೂಡಿರುವ ಭೋಗಿಗಳಿಗಾಗಿ ಎಲ್ಲ. ಯೋಗಿಗಳು ರಾಜಕೀಯಕ್ಕೆ ಪ್ರವೇಶ ಮಾಡಿರುವುದರಲ್ಲಿ ತಪ್ಪಿಲ್ಲ ಎಂದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಿದ್ದಾರೆ. ಮೋದಿಯವರೂ ಕೂಡ ಯೋಗಿಯಾಗಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಅವರ ಜನಪ್ರಿಯತೆ ಮೊದಲಿನಂತೆಯೇ ಈಗಲೂ ಇದೆ. ಜನರ ನಂಬಿಕೆಯನ್ನು ಗಳಿಸಿದ್ದಾರೆ. ಮೋದಿಯವರು ಸನ್ಯಾಸಿಯಾಗಿದ್ದು, ದೇಶಕ್ಕಾಗಿ ಅವರು ತ್ಯಾಗ ಮಾಡುತ್ತಿದ್ದಾರೆ.
ಜನರು ಏನು ಮಾತನಾಡಿಕೊಳ್ಳುತ್ತಾರೆಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವೇ ಆ ಮಾತುಗಳಿಗೆ ಉತ್ತರವನ್ನು ನೀಡಲಿದೆ. ಆ್ಯಂಟಿ ರೋಮಿಯೋ ಸ್ಕ್ವಾಡ್ ಗಳು ದಂಪತಿಗಳಿಗೆ, ಮುಗ್ಧ ಜನರಿಗೆ ಸಮಸ್ಯೆಯನ್ನುಂಟು ಮಾಡುವುದಿಲ್ಲ. ನಮ್ಮ ಸರ್ಕಾರ ಯಾವುದೇ ತಾರತಮ್ಯವಿಲ್ಲದೆಯೇ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹಿಂದೂ ರಾಷ್ಟ್ರ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಭಾರತ ಹಿಂದೂ ರಾಷ್ಟ್ರವಾಗಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಿಂದುತ್ವ ಎಂಬುವುದು ಜೀವನದ ಹಾದಿಯಾಗಿದೆ ಎಂದು ಹೇಳುವ ಮೂಲಕ ಸ್ವತಃ ಸುಪ್ರೀಂಕೋರ್ಟ್ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.