
ನವದೆಹಲಿ: ಫೇಸ್ ಬುಕ್ ಫೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಒಡಿಶಾದ ಭದ್ರಕ್ ನಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಸುಮಾರು 2 ಸಾವಿರ ಪ್ಯಾರಾಮಿಲಿಟರಿ ಪಡೆಯ ಸಿಬ್ಬಂದಿಗಳನ್ನು ರವಾನೆ ಮಾಡಲಾಗಿದೆ.
ಈ ಬಗ್ಗೆ ಸ್ವತಃ ಕೇಂದ್ರ ಗೃಹ ಸಚಿವಾಲಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಿಂಸಾಚಾರವನ್ನು ಹತ್ತಿಕ್ಕುವ ಸಲುವಾಗಿ ಒಡಿಶಾ ಪೊಲೀಸರಿಗೆ ನೆರವಾಗುವ ಉದ್ದೇಶದಿಂದ ಪ್ಯಾರಾಮಿಲಿಟರಿ ಪಡೆಗಳನ್ನು ಒಡಿಶಾಗೆ ರವಾನಿಸಲಾಗುತ್ತಿದೆ. ಪ್ಯಾರಾಮಿಲಿಟರಿ ಪಡೆಯ 20 ಕಂಪನಿಗಳನ್ನು ತುರ್ತಾಗಿ ರವಾನಿಸಲಾಗುತ್ತಿದ್ದು, ಪ್ರತೀ ಕಂಪನಿಯಲ್ಲೂ 100 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಒಡಿಶಾ ಗಲಭೆ ಸಂಬಂಧ ಸುಮಾರು 20ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಿಂಸಾಚಾರದ ವೇಳೆ ಸಾಕಷ್ಟು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ.
ರಾಮ, ಸೀತೆ ಕುರಿತಂತೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹರಿದಾಡಿದ ವಿಚಾರ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಹಿಂದೂ ಪರ ಸಂಘಟನೆಗಳು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಏತನ್ಮಧ್ಯೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಕೋಮಿನವರು ಪರಸ್ಪರ ಕೈಕೈ ಮಿಲಾಯಿಸುವುದರೊಂದಿಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ಹಿಮ್ಮೆಟಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರಾದರೂ, ಮತ್ತೆ ಹಿಂಸಾಚಾರ ವ್ಯಾಪಕವಾದಜ ಪರಿಣಾಮ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಇದೀಗ ಕರ್ಫ್ಯೂ ಹೇರಲಾಗಿದ್ದು, ಪ್ರತಿಭಟನಾಕಾರರನ್ನು ಹಿಮ್ಮೆಟಿಸಲಾಗಿದೆ.
Advertisement