ಒಡಿಶಾದ ಬದ್ರಕ್ ನಲ್ಲಿ ಕೋಮುಗಲಭೆ; ಕರ್ಫ್ಯೂ ಜಾರಿ!
ಬದ್ರಕ್: ದಶಕಗಳ ಬಳಿಕ ಒಡಿಶಾದ ಬದ್ರಕ್ ನಲ್ಲಿ ಇದೇ ಮೊದಲ ಬಾರಿಗೆ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಭಾನುವಾರ ನಗರದಲ್ಲಿ ಕರ್ಫ್ಯೂ ಹೇರಲಾಗಿದೆ.
ರಾಮ, ಸೀತೆ ಕುರಿತಂತೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹರಿದಾಡಿದ ವಿಚಾರ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಹಿಂದೂ ಪರ ಸಂಘಟನೆಗಳು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಏತನ್ಮಧ್ಯೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಕೋಮಿನವರು ಪರಸ್ಪರ ಕೈಕೈ ಮಿಲಾಯಿಸುವುದರೊಂದಿಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ಹಿಮ್ಮೆಟಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರಾದರೂ, ಮತ್ತೆ ಹಿಂಸಾಚಾರ ವ್ಯಾಪಕವಾದಜ ಪರಿಣಾಮ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಇದೀಗ ಕರ್ಫ್ಯೂ ಹೇರಲಾಗಿದ್ದು, ಪ್ರತಿಭಟನಾಕಾರರನ್ನು ಹಿಮ್ಮೆಟಿಸಲಾಗಿದೆ.
ಇದಾಗ್ಯೂ ಯಾವುದೇ ಕ್ಷಣದಲ್ಲೂ ಹಿಂಸಾಚಾರ ಭುಗಿಲೇಳುವ ಶಂಕೆ ಇದ್ದು, ಸಂಜೆ 7 ಗಂಟೆಯವರೆಗೂ ಕರ್ಫ್ಯೂ ಹೇರಲಾಗಿದೆ. ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಜರಂಗದಳದ ಕಾರ್ಯಕರ್ತನೋರ್ವ ಶ್ರೀರಾಮನ ಹೊಗಳಿ ಹಾಕಿದ್ದ ಪೋಸ್ಟ್ ವೊಂದಕ್ಕೆ 3 ಮಂದಿ ಅನ್ಯ ಕೋಮಿನ ಯುವಕರು ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂತೆಯೇ ಈ ವೇಳೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.
ಹಿಂಸಾಚಾರದಿಂದಾಗಿ ಹಲವು ಸರ್ಕಾರಿ ಆಸ್ತಿ-ಪಾಸಿಗಳಿಗೆ ನಷ್ಟವಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬದ್ರಕ್ ನ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಲಾಗಿದ್ದು, ನಗರದಾದ್ಯಂತ ಪ್ರಕ್ಷುಬ್ದ ವಾತಾವರಣ ನೆಲೆಸಿದೆ. 1991ರಲ್ಲಿ ನಡೆದ ಕೋಮು ಗಲಭೆ ಬಳಿಕ ಭದ್ರಕ್ ನಲ್ಲಿ ಯಾವುದೇ ಕೋಮುಗಲಭೆಗಳು ನಡೆದಿರಲಿಲ್ಲ. ಇದೀಗ ಫೇಸ್ ಬುಕ್ ಪೋಸ್ಟ್ ವೊಂದರಿಂದಾಗಿ ಮತ್ತೆ ಹಿಂಸಾಚಾರ ಆರಂಭವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ