ಕಲ್ಲುತೂರಾಟ ನಿಯಂತ್ರಿಸಲು ಕೇಂದ್ರ ಹೊಸ ತಂತ್ರ: ಕಾಶ್ಮೀರದಲ್ಲಿ ಮಹಿಳಾ ಬೆಟಾಲಿಯನ್ ಬಳಕೆಗೆ ನಿರ್ಧಾರ

ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದ್ದು, ಕಲ್ಲು ತೂರಾಟ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರವೊಂದನ್ನು ರೂಪಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದ್ದು, ಕಲ್ಲು ತೂರಾಟ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರವೊಂದನ್ನು ರೂಪಿಸಿದೆ. 
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿನ ವಾತಾವರಣ ನಿಯಂತ್ರಿಸಲು ಅಲ್ಲಿನ ರಾಜ್ಯ ಸರ್ಕಾರ ಸಾಕಷ್ಟು ಶ್ರಮ ಪಡುತ್ತಲೇ ಇದೆ. ಆದರೂ ಕಾಶ್ಮೀರದಲ್ಲಿ ಕಲ್ಲುತೂರಾಟಗಾರರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ವಿಶೇಷ ಮಹಿಳಾ ಬೆಟಾಲಿಯನ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 
5 ಇಂಡಿಯಾ ರಿಸರ್ವ್ಡ್ ಬೆಟಾಲಿಯನ್ ಪಡೆಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಒಂದೊಂದು ಬೆಟಾಲಿಯನ್ ನಲ್ಲೂ 1,000 ಮಹಿಳಾ ವಿಶೇಷ ಪಡೆಗಳಿರಲಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಗಳೊಂದಿಗೆ 1000 ಮಹಿಳಾ ವಿಶೇಷ ಬೆಟಾಲಿಯನ್ ಗಳು ಕೈಜೋಡಿಸಲಿದ್ದಾರೆ, ಈ ಮೂಲಕ ಕಾಶ್ಮೀರದಲ್ಲಿ ಭದ್ರತೆಯೊದಗಿಸಲಿದ್ದಾರೆ. 
ಇಂಡಿಯಾ ರಿಸರ್ವ್ಡ್ ಬೆಟಾಲಿಯನ್'ನಲ್ಲಿ ಮಹಿಳಾ ಪೊಲೀಸ್ ಪಡೆಗಳಿದ್ದು, ಈಗಾಗಲೇ ಇದಕ್ಕೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಪ್ರಕ್ರಿಯೆಗಳೂ ಕೂಡ ಆರಂಭವಾಗಿದ್ದು, 5,000 ಹುದ್ದೆಗಳಿಗೆ 1,40,000 ಯುವಕರು ಅರ್ಜಿ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ. 
ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, 1,40,000 ಅರ್ಜಿಗಳ ಪೈಕಿ ಶೇ.40 ರಷ್ಟು ಅರ್ಜಿಗಳು ಕಾಶ್ಮೀರದಿಂದಲೇ ಬಂದಿವೆ ಎಂದು ಆಧಿಕಾರಿಗಳು ಹೇಳಿದ್ದಾರೆ. 
ಮಹಿಳಾ ಬೆಟಾಲಿಯನ್ ಗಳು ಸ್ಥಳೀಯ ಸಮಸ್ಯೆಗಳಾದ ಕಲ್ಲು ತೂರಾಟ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವತ್ತ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. 
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಹಾಗೂ ಸಂತಸವನ್ನು ವ್ಯಕ್ತಪಡಿಸಿದ್ದು, ಕೇವಲ 30 ಅರ್ಜಿದಾರರು ಮಾತ್ರ ಹುದ್ದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 
ಮಹಿಳಾ ಬೆಟಾಲಿಯನ್ ಗಳ ನಿಯೋಜನೆ ಕುರಿತಂತೆ ಇಂದು ಗೃಹ ಸಚಿವ ರಾಜನಾಥ ಸಿಂಗ್ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. 
2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗಾಗಿ ರೂ.80,000 ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದರು. 
ಇದರಂತೆ ಐಆರ್'ಬಿಎಸ್ (ಇಂಡಿಯಾ ರಿಸರ್ವ್ಡ್ ಬೆಟಾಲಿಯನ್') ನಿಯೋಜಿಸಲು ಕೇಂದ್ರ ತೀರ್ಮಾನಿಸಿದ್ದು, ಇದರಿಂದ ಶೇ.60 ರಷ್ಟು ಸ್ಥಳೀಯ ಯುವಕರಿಗೆ ಉದ್ಯೋಗವಾಕಾಶ ದೊರಕಲಿದೆ. ಬೆಟಾಲಿಯಿನ್ ಪಡೆಗಳನ್ನು ನೋಡಿಕೊಳ್ಳಲು ರೂ.61 ಕೋಟಿ ವೆಚ್ಚ ತಗುಲಲಿದ್ದು, ಶೇ.75ರಷ್ಟನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿದೆ. 
ವಿಶೇಷ ಬೆಟಾಲಿಯನ್ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಅಗತ್ಯ ಬಿದ್ದರೆ ಇತರೆ ರಾಜ್ಯಗಳಲ್ಲೂ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ 144 ಸಶಸ್ತ್ರ ಮೀಸಲು ಪಡೆಗಳಿದ್ದು, ಭದ್ರತೆ ಹೆಚ್ಚಿಸಲು ವಿಶೇಷ ಬೆಟಾಲಿಯನ್ ಗಳನ್ನು ನಿಯೋಜಿಸಲಾಗಿದೆ. 5 ಐಆರ್'ಬಿಗಳ ಪೈಕಿ ನಾಲ್ಕು ಪಡೆಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಕರ್ತವ್ಯ ನಿರ್ವಹಿಸಲಿದೆ. ಉಳಿದ ಒಂದು ಬೆಟಾಲಿಯನ್ ಪಡೆ ಜಮ್ಮು ಮತ್ತು ಕಾಶ್ಮೀರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com